ಅಂತರರಾಷ್ಟ್ರೀಯ

ಪಾಕ್ ಪ್ರಧಾನಿ ಇಮ್ರಾನ್ ವಿರುದ್ಧ ಮಾರ್ಚ್ 28ರಂದು ಅವಿಶ್ವಾಸ ನಿರ್ಣಯ

ಪಾಕ್ ಪ್ರಧಾನಿ ಇಮ್ರಾನ್ ವಿರುದ್ಧ ಮಾರ್ಚ್ 28ರಂದು ಅವಿಶ್ವಾಸ ನಿರ್ಣಯ

ಇಸ್ಲಾಮಾಬಾದ್: ಮಾರ್ಚ್ 19 : ಪಾಕಿಸ್ತಾನ ಆಡಳಿತರೂಢ ಪಕ್ಷದ ಸುಮಾರು 24ಕ್ಕೂ ಹೆಚ್ಚು ಅತೃಪ್ತರು ಇಮ್ರಾನ್ ಖಾನ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಇಮ್ರಾನ್ ಖಾನ್ ವಿರುದ್ಧ ಮತ ಹಾಕುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಕುರ್ಚಿ ಅಲ್ಲಾಡುತ್ತಿದ್ದು, ಮಾರ್ಚ್ 28ರಂದು ಇದಕ್ಕೆ ಖಚಿತ ಉತ್ತರ ಸಿಗಲಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಸುಮಾರು 100 ಶಾಸಕರು ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದರು. ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಮಾರ್ಚ್ 21ರಂದು ಕರೆಯುವ ನಿರೀಕ್ಷೆ ಇದ್ದು, ಮಾರ್ಚ್ 28 ರಂದು ಅವಿಶ್ವಾಸ ನಿರ್ಣಯದ ಮತದಾನ ನಡೆಯುವ ಸಾಧ್ಯತೆಯಿದೆ.

ಜಂಟಿ ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ಬಳಿಕ ಇಮ್ರಾನ್ ಖಾನ್ ನೇತೃತ್ವದ ಮೈತ್ರಿ ಪಕ್ಷಗಳು ಹತಾಶರಾಗಲು ಪ್ರಾರಂಭಿಸಿದರು. ಈ ಮಧ್ಯೆ, ಇಮ್ರಾನ್ ಖಾನ್ ಪಕ್ಷದ ಸುಮಾರು 24 ಸಂಸದರು ಪಕ್ಷಕ್ಕೆ ಗುಡ್ ಬೈ ಹೇಳಲು ಸಿದ್ಧರಾಗಿರುವುದಾಗಿ ಘೋಷಣೆ ಮಾಡಿದಾಗ ಆಡಳಿತರೂಢ ತೆಹ್ಲಿಕ್-ಇ-ಇನ್ಸಾಫ್ ಗೆ ಆಘಾತವಾಗಿದೆ. ಇಮ್ರಾನ್ ಖಾನ್ ಪಕ್ಷದವ್ರೇ ಈಗ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಸದ್ಯ ಪಾಕಿಸ್ತಾನದಲ್ಲಿ ಕರ್ನಾಟಕದಂತೆ ರೆಸಾರ್ಟ್ ರಾಜಕಾರಣ ನಡೆಯುತ್ತಿದ್ದು, ಇಮ್ರಾನ್ ಸರಕಾರದ ವಿರುದ್ಧ ಅತೃಪ್ತಗೊಂಡಿರುವ ಇಸ್ಲಾಮಾಬಾದ್‌ನ ಸಿಂಧ್ ಹೌಸ್‌ನಲ್ಲಿ ತಂಗಿದ್ದಾರೆ. ಪಿಟಿಐ ಸಂಸದರಿಗೆ ಭಾರಿ ಲಂಚ ನೀಡುವ ಮೂಲಕ ಪ್ರಭಾವ ಬೀರಲು ಸಿಂಧ್ ಸರ್ಕಾರ ಅವರನ್ನು ಅಪಹರಿಸಿದೆ ಎಂದು ಸರ್ಕಾರ ಆರೋಪಿಸಿದೆ. ಆದರೆ ಶಾಸಕರು ತಮ್ಮ ಸ್ವಂತ ಇಚ್ಛೆಯಿಂದಲೇ ಉಳಿದುಕೊಂಡಿದ್ದಾರೆ ಮತ್ತು “ನಮ್ಮ ಆತ್ಮಸಾಕ್ಷಿಯ ಪ್ರಕಾರ” ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರೆ ಅದರಿಂದ ಹೊರಬರಲು ಸಿದ್ಧ ಎಂದು ಅತೃಪ್ತರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಈ ಮಧ್ಯೆ ಸಿಂಧ್ ಹೌಸ್ ನಲ್ಲಿ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು ಗೇಟ್ ಮುರಿದು ಒಳ ನುಗ್ಗಿದ್ದಾರೆಂಬ ಮಾಹಿತಿ ಹೊರಬಂದಿದೆ. ಒಟ್ಟಿನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದು, ಮಾರ್ಚ್ 28 ರಂದು ಅವಿಶ್ವಾಸ ನಿರ್ಣಯಕ್ಕೆ ಸೋಲು ಉಂಟಾಗಲಿದೆಯಾ ಅಥವಾ ಇಮ್ರಾನ್ ಅಧಿಕಾರದಿಂದ ಕೆಳಗಿಳಿಯುತ್ತಾರಾ? ಅನ್ನೋದನ್ನು ಕಾದು ನೋಡ್ಬೇಕಿದೆ.

ಸುದ್ದಿ ಓದಿ