ತಕ್ಷಣ ಉಕ್ರೇನ್ ತೊರೆಯಲು ಅಮೆರಿಕನ್ನರಿಗೆ ಜೋ ಬಿಡೆನ್ ಎಚ್ಚರಿಕೆ
ವಾಷಿಂಗ್ಟನ್: ಫೆಬ್ರವರಿ 11 ರಷ್ಯಾ ಮತ್ತು ನ್ಯಾಟೋ ಪಡೆಗಳ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಯುಎಸ್ ಅಧ್ಯಕ್ಷ ಜೋ ಬಿಡನ್ ತನ್ನ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಖಾಸಗಿ ನ್ಯೂಸ್ ನೊಂದಿಗೆ ಮಾತನಾಡಿರುವ ಅವರು, ಯುಎಸ್ ಮತ್ತು ರಷ್ಯಾದ ಮಿಲಿಟರಿ ನಡುವೆ ಯಾವುದೇ ಸಮಯದಲ್ಲಿ ನೇರ ಹೋರಾಟ ಪ್ರಾರಂಭವಾಗಬಹುದು ಎಂದು ಹೇಳಿದ್ದಾರೆ.
“ನಾವು ವಿಶ್ವದ ಅತಿದೊಡ್ಡ ಸೈನ್ಯದೊಂದಿಗೆ ಸಂಘರ್ಷದ ಸ್ಥಿತಿಯಲ್ಲಿದ್ದೇವೆ. ಇದು ತುಂಬಾ ವಿಭಿನ್ನವಾದ ಪರಿಸ್ಥಿತಿ. ಶೀಘ್ರದಲ್ಲೇ ಪರಿಸ್ಥಿತಿಗಳು ಕೆಟ್ಟದಾಗಬಹುದು. ಅಮೆರಿಕದ ನಾಗರಿಕರು ತಕ್ಷಣವೇ ಉಕ್ರೇನ್ ತೊರೆಯಬೇಕು. ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸುವುದು ಎಂದರೆ ವಿಶ್ವ ಯುದ್ಧದ ಆರಂಭ” ಎಂದು ಜೋ ಬಿಡೆನ್ ತಿಳಿಸಿದ್ದಾರೆ.
ಈ ಮಧ್ಯೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಲಹೆಗಾರರೊಬ್ಬರು, “ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಂಡರೆ ಅಮೆರಿಕ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಸ್ಥಿತಿಯಲ್ಲಿರುವುದಿಲ್ಲ” ಎಂದು ತಿಳಿಸಿದ್ದಾರೆ. “ರಷ್ಯಾದ ಸೈನ್ಯವು ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಿದರೆ, ಅದರ ಟ್ಯಾಂಕ್‌ಗಳು ಕೇವಲ 48 ಗಂಟೆಗಳಲ್ಲಿ ಉಕ್ರೇನ್‌ನ ರಾಜಧಾನಿ ಕೀವ್‌ಗೆ ಪ್ರವೇಶಿಸುತ್ತವೆ” ಎಂದು ಅಮೆರಿಕದ ಥಿಂಕ್ ಟ್ಯಾಂಕ್ ಕೂಡ ಹೇಳಿದೆ
ಯುದ್ಧದ ಸಾಧ್ಯತೆಯ ನಡುವೆ ರಷ್ಯಾ ಕೂಡ ತನ್ನ ಸಿದ್ಧತೆ ಪ್ರಾರಂಭಿಸಿದೆ. ರಷ್ಯಾ ಗುರುವಾರ ಬೆಲರೂಸಿಯನ್ ಸೈನ್ಯದೊಂದಿಗೆ ವ್ಯಾಯಾಮವನ್ನು ಪ್ರಾರಂಭಿಸಿತು. ಇತ್ತೀಚಿನ ವರ್ಷಗಳಲ್ಲಿ ಇದು ಅತಿದೊಡ್ಡ ಜಂಟಿ ಮಿಲಿಟರಿ ಎಕ್ಸ್ ಸೈಜ್ ಇದಾಗಿದೆ. ಟ್ಯಾಂಕ್‌ಗಳು, ಫೈಟರ್ ಏರ್‌ಕ್ರಾಫ್ಟ್‌ಗಳು ಮತ್ತು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳೊಂದಿಗೆ ಸಾವಿರಾರು ಸೈನಿಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಬೆಲಾರಸ್ನಲ್ಲಿ ರಷ್ಯಾದ 30 ಸಾವಿರಕ್ಕೂ ಹೆಚ್ಚು ಯೋಧರು ಮಿಲಿಟರಿ ಎಕ್ಸ್ ಸೈಜ್ ನಲ್ಲಿ ಭಾಗವಹಿಸಿದ್ದು, ಫೆಬ್ರವರಿ 20ರವರೆಗೆ ನಡೆಯಲಿದೆ.
ಯುದ್ಧದ ಬೆದರಿಕೆಯ ನಡುವೆ ಯುಎಸ್ ಕಳೆದ ರಾತ್ರಿ ಉಕ್ರೇನ್‌ಗೆ ಎರಡನೇ ಹಂತದ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ. ಇದಕ್ಕೂ ಮೊದಲು $200 ಮಿಲಿಯನ್ ಭದ್ರತಾ ನೆರವನ್ನು ಉಕ್ರೇನ್‌ಗೆ ಕಳುಹಿಸಲಾಗಿತ್ತು. ಅಲ್ಲದೆ, ಪೂರ್ವ ಯುರೋಪ್‌ನಲ್ಲಿನ ಯುದ್ಧ ಭೀತಿ ಹಿನ್ನೆಲೆಯಲ್ಲಿ ಅಮೆರಿಕದ 8500 ಪಡೆಗಳನ್ನು ಅಲರ್ಟ್ ನಲ್ಲಿ ಇಡಲಾಗಿದೆ.