ಕ್ಯಾಲಿಫೋರ್ನಿಯಾ ವಾಸಿಗೆ ಖುಲಾಯಿಸಿದ ಜಾಕ್ ಪಾಟ್ ..!
ಕ್ಯಾಲಿ ಫೋರ್ನಿಯಾ, ಅ 6: ಕ್ಯಾಲಿಫೋರ್ನಿಯಾ ವಾಸಿಯೊಬ್ಬರ ಮನೆಯಲ್ಲಿ ಹಣದ ಹೊಳೆಯೇ ಹರಿದಿದೆ. ಅಮೆರಿಕಾದಲ್ಲಿ ಲಕ್ಷಾಂತರ ಮಂದಿ ಲಾಟರಿ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಬಹು ಕೋಟಿ "ಪವರ್ ಬಾಲ್ ಲಾಟರಿ" ಫಲಿತಾಂಶಗಳು ಹೊರಬಿದ್ದಿವೆ.
ಸುಮಾರು 70 ಕೋಟಿ ಜಾಕ್‌ಪಾಟ್‌ಗಾಗಿ ಸೋಮವಾರ ರಾತ್ರಿ ಎತ್ತಿದ ಡ್ರಾದಲ್ಲಿ, ಎಲ್ಲಾ ಆರು ಸಂಖ್ಯೆಗಳು ಸರಿಯಾಗಿ ಹೊಂದಿಕೆಯಾದ ಏಕೈಕ ಲಾಟರಿ ಟಿಕೆಟ್ ಗೆ ಜಾಕ್ ಪಾಟ್ ಲಭಿಸಿದೆ. ಕ್ಯಾಲಿಫೋರ್ನಿಯಾದ ಮುರೋ ಬೇ ಪ್ರದೇಶದ ಕಿರಾಣಿ ಅಂಗಡಿಯಲ್ಲಿ ಯಾರೋ ಒಬ್ಬ ವ್ಯಕ್ತಿ ಟಿಕೆಟ್ ಖರೀದಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಆದರೆ,ಅದೃಷ್ಟಶಾಲಿ ವ್ಯಕ್ತಿ ಯಾರು ಎಂಬುದು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಟಿಕೆಟ್ ಖರೀದಿಸಿದ ವ್ಯಕ್ತಿ ತಾವು ಎಂದು ಈವರೆಗೆ ಯಾವುದೇ ವ್ಯಕ್ತಿ ಘೋಷಿಸಿಕೊಂಡಿಲ್ಲ. ಈ ವಿಜೇತನಿಗೆ ಲಾಟರಿಯಲ್ಲಿ ಲಭ್ಯವಾಗುವ ನಗದು ಹಣವನ್ನು ಒಂದೇ ಬಾರಿಗೆ ಪಡೆದುಕೊಳ್ಳುವುದಾದರೆ, ಕೇವಲ 49.6 ಕೋಟಿ ಡಾಲರ್ (ಸುಮಾರು ರೂ. 3,696 ಕೋಟಿ) ಮಾತ್ರ ಲಾಟರಿ ಸಂಸ್ಥೆ ಪಾವತಿಸುತ್ತದೆ. ಲಾಟರಿ ವಿಜೇತರು ಹಣವನ್ನು ಕಂತುಗಳಲ್ಲಿ ತೆಗೆದುಕೊಳ್ಳಲು ಒಪ್ಪಿದರೆ, ವಿಜೇತರು ವರ್ಷಕ್ಕೊಮ್ಮೆ ದೊಡ್ಡ ಮೊತ್ತ ಹಣವನ್ನು ಪಡೆಯಲಿದ್ದು, ಇದನ್ನು 29 ವರ್ಷಗಳವರೆಗೆ ನೀಡಲಾಗುತ್ತದೆ. ಈ ಎರಡು ಆಯ್ಕೆಗಳಲ್ಲಿ ಯಾವುದನ್ನು ಒಪ್ಪಿಕೊಂಡರೂ, ತೆರಿಗೆ ಕಡಿತಗೊಳಿಸಿ ವ್ಯಕ್ತಿಗೆ ಹಣ ಪಾವತಿಸಲಾಗುತ್ತದೆ. ಮತ್ತೊಂದೆಡೆ ಸುಮಾರು 28 ಲಕ್ಷ ಜನರು ಸಣ್ಣ ಪ್ರಮಾಣ ನಗದು ಬಹುಮಾನ ವಿಜೇತರಾಗಿದ್ದಾರೆ.