ಡಯಟ್ ಪ್ರಾಂಶುಪಾಲರಾಗಿ ಜೆ.ಪಿ. ತಂಗಡಿ ಅಧಿಕಾರ ಸ್ವೀಕಾರ

ಡಯಟ್ ಪ್ರಾಂಶುಪಾಲರಾಗಿ ಜೆ.ಪಿ. ತಂಗಡಿ ಅಧಿಕಾರ ಸ್ವೀಕಾರ  J.P. Tangadi assumes charge as DIET Principal

ಚಿಕ್ಕೋಡಿ ಜುಲೈ 5: ಚಿಕ್ಕೋಡಿ ಡಯಟ್ (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ನೂತನ ಪ್ರಾಂಶುಪಾಲರಾಗಿ ಜೆ.ಪಿ. ತಂಗಡಿ ಅಧಿಕಾರ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಚಂದ್ರಶೇಖರ ಅರಭಾಂವಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಸೇವೆ ಸಲ್ಲಿಸಿದವರಿಗೆ ಸೂಕ್ತ ಗೌರವ ಮತ್ತು ಜವಾಬ್ದಾರಿ ದೊರೆಯುವುದು ಸಹಜ. ಶಿಕ್ಷಣ ಕ್ಷೇತ್ರದಲ್ಲಿ ಜೆ.ಪಿ. ತಂಗಡಿ ಅವರು ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಸಂಪಾದಿಸಿದ್ದು, ಅವರ ನೇತೃತ್ವದಲ್ಲಿ ಡಯಟ್ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಸುಮಾರು ಮೂರು ದಶಕಗಳಿಂದ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಕ್ಷೇತ್ರ ಸಮನ್ವಯಾಧಿಕಾರಿಯಾಗಿ, ಉಪನ್ಯಾಸಕರಾಗಿ ಹಾಗೂ ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿರುವ ಜೆ.ಪಿ. ತಂಗಡಿ ಅವರು ಶಿಕ್ಷಕರ ತರಬೇತಿ ಹಾಗೂ ಶಿಕ್ಷಣ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಜೆ.ಪಿ. ತಂಗಡಿ, ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು. ಶಿಕ್ಷಕರಿಗೆ ಪರಿಣಾಮಕಾರಿ ತರಬೇತಿ ನೀಡುವುದು, ಚಟುವಟಿಕೆ ಆಧಾರಿತ ಕಲಿಕೆಗೆ ಉತ್ತೇಜನ ನೀಡುವುದು ಹಾಗೂ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.  ಕಾರ್ಯಕ್ರಮದಲ್ಲಿ ಅಕ್ಷರದಾಸೋಹ ಇಲಾಖೆ ಅಧಿಕಾರಿಗಳು, ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.