ಅಂತರರಾಷ್ಟ್ರೀಯ

ನೆಹರು ಪ್ರಮಾದ ಮಾಡಿದರೆಂದು ಭಾವಿಸುವುದು ತಪ್ಪು; ಟಿಬೆಟ್ ಅಧ್ಯಕ್ಷ

ನೆಹರು ಪ್ರಮಾದ ಮಾಡಿದರೆಂದು ಭಾವಿಸುವುದು ತಪ್ಪು; ಟಿಬೆಟ್ ಅಧ್ಯಕ್ಷ

ವಾಷಿಂಗ್ಟನ್: ಏಪ್ರಿಲ್ 29: ಟಿಬೆಟ್ ಮೇಲೆ ಚೀನಾ ತನ್ನ ಹಕ್ಕನ್ನು ಸಾಧಿಸಿದಾಗ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು “ಪ್ರಮಾದ ಮಾಡಿದ್ದಾರೆ” ಎಂದು ಅನೇಕ ಜನ ಹೇಳುತ್ತಾರೆ. ಆದರೆ ಅವರು ತಮ್ಮ ದೇಶಕ್ಕೆ ಉತ್ತಮವೆಂದು ಭಾವಿಸಿದ್ದನ್ನೇ ಮಾಡಿದರು ಎಂದು ಟಿಬೆಟ್ ಸರ್ಕಾರದ ಅಧ್ಯಕ್ಷ ಪೆನ್ಪಾ ತ್ಸೆರಿಂಗ್ ಅವರು ಹೇಳಿದ್ದಾರೆ.

ಜೋ ಬೈಡೆನ್ ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಯುಎಸ್ ಕಾಂಗ್ರೆಸ್ ಸದಸ್ಯರನ್ನು ಭೇಟಿ ಮಾಡಲು ಯುಎಸ್ ಗೆ ತೆರಳಿರುವ ಪೆನ್ಪಾ ತ್ಸೆರಿಂಗ್ ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 2014 ರ ನಂತರ ಟಿಬೆಟ್ ವಿಷಯದ ಬಗ್ಗೆ ಭಾರತವು ತನ್ನ ನಿಲುವನ್ನು ಬದಲಾಯಿಸಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಟಿಬೆಟ್ ಕುರಿತು ಜವಾಹರಲಾಲ್ ನೆಹರು ಅವರ ನಿರ್ಧಾರಗಳು ತಮ್ಮದೇ ಆದ ವಿಶ್ವ ದೃಷ್ಟಿಕೋನದಿಂದಾಗಿ ಮತ್ತು ಅವರು ಚೀನಾದ ಮೇಲೆ ಇಟ್ಟಿದ್ದ ಅತಿಯಾದ ನಂಬಿಕೆ ಮತ್ತು ವಿಶ್ವಾಸದ ಪ್ರತೀಕವಾಗಿತ್ತು ಎಂದು ಹೇಳಿದರು.

ಅವರ ಆ ನಿರ್ಧಾರಕ್ಕಾಗಿ ನಾನು ಜವಹರಲಾಲ್ ಪಂಡಿತ್ ಅವರನ್ನು ದೂಷಿಸುವುದಿಲ್ಲ. ಪ್ರತಿ ರಾಷ್ಟ್ರಕ್ಕೂ ರಾಷ್ಟ್ರೀಯ ಹಿತಾಸಕ್ತಿಯು ಮೊದಲಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ . ಆ ಸಮಯದಲ್ಲಿ ಅವರು ಭಾರತಕ್ಕೆ ಉತ್ತಮವೆಂದು ಭಾವಿಸಿದ್ದನ್ನು ಮಾಡಿದರು ಎಂದು ಅಧ್ಯಕ್ಷ ತ್ಸೆರಿಂಗ್ ಹೇಳಿದರು. ಭಾರತ ಮಾತ್ರವಲ್ಲದೆ ಹಲವಾರು ದೇಶಗಳು ಟಿಬೆಟ್ ರಾಷ್ಟ್ರದ ಮೇಲೆ ಚೀನಾದ ಹಕ್ಕುಗಳನ್ನು ಒಪ್ಪಿಕೊಂಡಿವೆ ಎಂದರು.

ಈಗ ಹಲವರು ಪಂಡಿತ್ ನೆಹರು ಪ್ರಮಾದ ಮಾಡಿದ್ದಾರೆಂದು ಭಾವಿಸುತ್ತಾರೆ. ವಾಸ್ತವವಾಗಿ ಅವರು ಚೀನಾವನ್ನು ತುಂಬಾ ನಂಬಿದ್ದರು. 1962 ರಲ್ಲಿ ಚೀನಾ ಭಾರತವನ್ನು ಆಕ್ರಮಿಸಿದಾಗ ಅವರ ಸಾವಿಗೆ ಇದು ಒಂದು ಕಾರಣ ಎಂದೂ ಕೆಲವರು ನಂಬುತ್ತಾರೆ ಎಂದು ಅವರು ಹೇಳಿದರು.

ಟಿಬೆಟಿಯನ್ ಅಧ್ಯಕ್ಷರು 2014 ರಿಂದ ಭಾರತದಲ್ಲಿ ವಿಷಯಗಳು ಬದಲಾಗಿವೆ ಎಂದು ಹೇಳಿದರು. ಟಿಬೆಟ್ PRC (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ನ ಭಾಗವಾಗಿದೆ ಎಂದು ಪುನರಾವರ್ತಿಸದೆ ಭಾರತವು ತನ್ನ (ನೆಹರು) ನೀತಿಯನ್ನು ಬದಲಾಯಿಸಿದೆ ಎಂದು ನಾನು ಭಾವಿಸುತ್ತೇನೆ ಎಂದು ಅಧ್ಯಕ್ಷ ತ್ಸೆರಿಂಗ್ ಹೇಳಿದರು.

ಸುದ್ದಿ ಓದಿ