ಏಪ್ರಿಲ್ ನಲ್ಲಿ ಇಸ್ರೇಲ್ ಪ್ರಧಾನಿ ಭಾರತಕ್ಕೆ ಭೇಟಿ
ನವದೆಹಲಿ: ಮಾರ್ಚ್ 22: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಏಪ್ರಿಲ್ ೩ ರಿಂದ ೫ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಈ ಭೇಟಿಯಲ್ಲಿ ಕೃಷಿ, ನೀರು, ವ್ಯಾಪಾರ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅತ್ಯುತ್ತಮ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇದು ಭಾರತ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧಗಳು 30 ವರ್ಷಗಳಾಗಿದ್ದು, ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ವೇಳೆ ಈ ಭೇಟಿ ನಡೆಯುತ್ತಿದೆ.
ಉಭಯ ನಾಯಕರು ಈ ಹಿಂದೆ ನವೆಂಬರ್ 2021 ರಲ್ಲಿ ಗ್ಲಾಸ್ಗೋದಲ್ಲಿ ಸಿಒಪಿ26ರ ಸಂದರ್ಭದಲ್ಲಿ ಭೇಟಿಯಾಗಿದ್ದರು.ಅವರು 16 ಆಗಸ್ಟ್ 2021ರಂದು ದೂರವಾಣಿ ಸಂಭಾಷಣೆಯನ್ನೂ ನಡೆಸಿದರು.
ಜುಲೈ 2017ರಲ್ಲಿ ಇಸ್ರೇಲ್‌ಗೆ ಪ್ರಧಾನಿ ಮೋದಿಯವರ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಸ್ರೇಲ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಿದವು. ಅಂದಿನಿಂದ, ಎರಡು ದೇಶಗಳು ಜ್ಞಾನ-ಆಧಾರಿತ ಆರ್ಥಿಕತೆಗಳಾಗಿ ನಾವೀನ್ಯತೆ ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಮೂಲಕ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢವಾಗಿಸುವುದನ್ನು ಮುಂದುವರೆಸಿವೆ.