ಅಂತರರಾಷ್ಟ್ರೀಯ

ವೆಸ್ಟ್ ಬ್ಯಾಂಕ್ ನಲ್ಲಿ 1,300 ವಸತಿ ಘಟಕ ನಿರ್ಮಾಣಕ್ಕೆ ಇಸ್ರೇಲ್ ಚಿಂತನೆ : ವಿಶ್ವಸಂಸ್ಥೆ ವಿಶೇಷ ಸಂಯೋಜಕರ ಕಳವಳ

ವೆಸ್ಟ್ ಬ್ಯಾಂಕ್ ನಲ್ಲಿ 1,300 ವಸತಿ ಘಟಕ ನಿರ್ಮಾಣಕ್ಕೆ ಇಸ್ರೇಲ್ ಚಿಂತನೆ : ವಿಶ್ವಸಂಸ್ಥೆ ವಿಶೇಷ ಸಂಯೋಜಕರ ಕಳವಳ

ಟೆಲ್ ಅವಿವ್, ಅ. 25: ಆಕ್ರಮಿತ ವೆಸ್ಟ್ ಬ್ಯಾಂಕ್ ಯಹೂದಿ ವಸಾಹತುಗಳಲ್ಲಿ 1,300 ಕ್ಕೂ ಹೆಚ್ಚು ವಸತಿ ಘಟಕಗಳನ್ನು ನಿರ್ಮಿಸುವ ಇಸ್ರೇಲ್ ಉದ್ದೇಶದ ಬಗ್ಗೆ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಗಾಗಿನ ವಿಶ್ವಸಂಸ್ಥೆಯ ವಿಶೇಷ ಸಂಯೋಜಕ, ಟಾರ್ ವೆನ್ನೆಸ್ಲ್ಯಾಂಡ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

"ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲಿ ವಸಾಹತು ವಿಸ್ತರಣೆ ಮುಂದುವರಿದಿರುವ ಬಗ್ಗೆ ನಾನು ತೀವ್ರ ಕಳವಳ ಹೊಂದಿದ್ದೇನೆ. ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಎಲ್ಲಾ ವಸಾಹತುಗಳು ಕಾನೂನುಬಾಹಿರವೆಂದು ನಾನು ಪುನರುಚ್ಚರಿಸುತ್ತೇನೆ. ಈ ಯೋಜನೆ ಶಾಂತಿ ಪ್ರಕ್ರಿಯೆಗೆ ಗಣನೀಯ ಅಡಚಣೆಯಾಗಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು,"ಎಂದು ಟ್ವಿಟರ್ ಮೂಲಕ ಪ್ರಕಟಿಸಲಾದ ವೆನ್ನೆಸ್ಲ್ಯಾಂಡ್ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಇಸ್ರೇಲಿ ಅಧಿಕಾರಿಗಳು ವೆಸ್ಟ್ ಬ್ಯಾಂಕ್ ನ ಯಹೂದಿ ವಸಾಹತುಗಳಲ್ಲಿ 1,300 ಕ್ಕೂ ಹೆಚ್ಚು ವಸತಿ ಘಟಕಗಳ ನಿರ್ಮಾಣಕ್ಕೆ ಬಿಡ್ಡಿಂಗ್ ಆರಂಭಿಸಿದರು. ಒಟ್ಟು 1,355 ವಸತಿ ಘಟಕಗಳಲ್ಲಿ  729 ಏರಿಯಲ್‌ ನಲ್ಲಿ, 324 ಬೀಟ್ ಎಲ್‌ನಲ್ಲಿ, ಹಾಗೂ 102 ಎಲ್ಕಾನ್‌ನಲ್ಲಿ ನಿರ್ಮಾಣವಾಗಲಿವೆ ಎಂದು ಭಾನುವಾರ ಹ್ಯಾರೆಟ್ಜ್ ಪತ್ರಿಕೆ ವರದಿ ಮಾಡಿದೆ.

ಸುಮಾರು 600,000 ಇಸ್ರೇಲಿಗಳು ಈಗಾಗಲೇ ವಾಸಿಸುತ್ತಿರುವ ವೆಸ್ಟ್ ಬ್ಯಾಂಕ್ ನಲ್ಲಿ ವಸಾಹತು ಚಟುವಟಿಕೆಗಳು, ಪ್ಯಾಲೆಸ್ಟೀನಿಯರೊಂದಿಗಿನ ಶಾಂತಿ ಸಂಧಾನದ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಅಡೆತಡೆ ಎಂದು ಪರಿಗಣಿಸಲಾಗಿದೆ.

ಸುದ್ದಿ ಓದಿ