ಅಂಬೇಡ್ಕರ್ ಅವಹೇಳನ: ವೇದಮೂರ್ತಿ ಬಂಧನಕ್ಕೆ ಆಗ್ರಹ
ಲೋಕದರ್ಶನ ವರದಿ
ಮಾಂಜರಿ 7: ಸಂವಿಧಾನ ಶಿಲ್ಪಿ, ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಂಡ್ಯ ಜಿಲ್ಲೆಯ ವೇದಮೂರ್ತಿ ಎಂಬಾತನನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಂಜರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಲಿತ ಬಾಂಧವರು ಅಂಗಡಿ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ದೊಡ್ಡಯ್ಯಚೇನಹಳ್ಳಿ ಗ್ರಾಮದ ವೇದಮೂರ್ತಿ ಎಂಬಾತ ಸಾಮಾಜಿಕ ಜಾಲತಾಣದ ಪೋಸ್ಟ್ವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಮೂಲಕ ಸಂವಿಧಾನ ಹಾಗೂ ದೇಶದ ಘನತೆಗೆ ಧಕ್ಕೆ ತಂದಿರುವ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಮಾಂಜರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಲಿತ ಮುಖಂಡರು ಹಾಗೂ ಬಾಂಧವರು ಸೋಮವಾರ ಅಂಗಡಿ ಪೊಲೀಸ್ ಠಾಣೆಗೆ ತೆರಳಿ ಪಿಎಸ್‌ಐ ಲಕ್ಷ್ಮಣಪ್ಪ ಅವರಿಗೆ ಮನವಿ ಸಲ್ಲಿಸಿದರು. ವೇದಮೂರ್ತಿಯನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.