ಬ್ರೇಕ್ ಬದಲು ಆಕ್ಸಿಲೇಟರ್ ತುಳಿದಿದ್ದೇ ಎಡವಟ್ಟಾಯ್ತು
ಟೆಂಪೆ, ಯು.ಎಸ್: ಮೇ 29: ಯುಎಸ್‌ನ ಟೆಂಪೆಯಲ್ಲಿನ ಚಿಲ್ಲರೆ ಅಂಗಡಿಯೊಂದಕ್ಕೆ ಕಾರೊಂದು ಆಕಸ್ಮಿಕವಾಗಿ ನುಗ್ಗಿದ ನಂತರ ಅಂಗಡಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳ ವರದಿಯಾಗಿವೆ. ಅಂಗಡಿಯ ಸಿಸಿಕ್ಯಾಮೆರಾ ದೃಶ್ಯದಲ್ಲಿ ಶಾಪಿಂಗ್ ಮಾರ್ಟ್‌ನೊಳಗೆ ಇಬ್ಬರು ವ್ಯಕ್ತಿಗಳು ಹರಟೆ ಹೊಡೆಯುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಬಿಳಿ ಬಣ್ಣದ ಸೆಡಾನ್ ಅಂಗಡಿಯ ಮುಂಭಾಗದ ಮೂಲಕ ನುಗ್ಗಿ ನಿಂತಿದ್ದವರಿಗೆ ಅಪ್ಪಳಿಸುತ್ತೆ.
ಅಂಗಡಿಯಲ್ಲಿ ನಿಂತಿದ್ದ ಇಬ್ಬರನ್ನು ಕಾರ್ ಸುಮಾರು 25 ಅಡಿಗಳಷ್ಟು ದೂರ ನೂಕಿದೆ. ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೇಕ್ ಪೆಡಲ್ ಬದಲಿಗೆ ಚಾಲಕ ಅಚಾತುರ್ಯದಿಂದ ಆಕ್ಸಿಲೇಟರ್ ತುಳಿದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಟೆಂಪೆ ಪೊಲೀಸರು ತಿಳಿಸಿದ್ದಾರೆ.