ಉಕ್ರೇನ್ ಬಿರುಗಾಳಿಗೆ ತತ್ತರಿಸಿದ ಷೇರುಪೇಟೆ! ಆರಂಭದಲ್ಲೇ ಸೆನ್ಸೆಕ್ಸ್ 1500 ಅಂಕ ಢಮಾರ್!!
ಮುಂಬೈ: ಫೆಬ್ರವರಿ 14 (ಯು.ಎನ್.ಐ.) ಉಕ್ರೇನ್‌ಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ. ಯುದ್ಧದ ಭೀತಿಯಿಂದಾಗಿ ವಿಶ್ವದಾದ್ಯಂತ ಹೂಡಿಕೆದಾರರು ಭಯಭೀತರಾಗಿದ್ದು, ಸುರಕ್ಷಿತ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಎಲ್ಲ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂದೇಟು ಹಾಕುತ್ತಿರುವುದರಿಂದ ಷೇರು ಪೇಟೆಯಲ್ಲಿ ಷೇರುಗಳ ಭಾರೀ ಮಾರಾಟ ಕಂಡು ಬರುತ್ತಿದೆ. ಇದರ ಪರಿಣಾಮ ಸೋಮವಾರ ದೇಶಿಯ ಮಾರುಕಟ್ಟೆ ಆರಂಭವಾದ ತಕ್ಷಣ ಸೆನ್ಸೆಕ್ಸ್ ಕೆಲವೇ ನಿಮಿಷಗಳಲ್ಲಿ 1,500 ಅಂಕಗಳ ಕುಸಿತ ಕಂಡಿದೆ.
ಮಾರುಕಟ್ಟೆ ಚೇತರಿಸಿಕೊಳ್ಳಲಿದ್ಯಾ?
ಉಕ್ರೇನ್ ಬಿಕ್ಕಟ್ಟಿನ ಒತ್ತಡವು ಮಾರುಕಟ್ಟೆಯ ಪ್ರಿ ಓಪನ್ ನಲ್ಲೇ ಕಾಣಿಸಿಕೊಂಡಿತು. ಬಿಎಸ್‌ಇ ಸೆನ್ಸೆಕ್ಸ್ ಆರಂಭವಾಗುವ ಪೂರ್ವದಲ್ಲಿ 9:15ರೊಳಗೆಯೇ ಸುಮಾರು 1500 ಪಾಯಿಂಟ್‌ಗಳಷ್ಟು (ಶೇ. 2.46) ಕುಸಿತವಾಗಿತ್ತು. ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ ಸುಮಾರು 1,200 ಅಂಕಗಳ ಕುಸಿತದೊಂದಿಗೆ ಆರಂಭವಾಯಿತು. ಕೆಲವೇ ನಿಮಿಷಗಳಲ್ಲಿ ಅದು 1,500 ಪಾಯಿಯಿಂಟ್ಸ್ ಗಡಿ ದಾಟಿತು. ಇದಾದ ಬಳಿಕ ಷೇರುಪೇಟೆ ಚೇತರಿಸಿಕೊಳ್ಳಲು ಆರಂಭಿಸಿದ್ರೂ ಸಹ ಇನ್ನೂ ಮಾರುಕಟ್ಟೆಯು ದೊಡ್ಡ ನಷ್ಟದಲ್ಲಿಯೇ ಇದೆ. ಸೋಮವಾರ ಇಂದಿನ ಮಾರುಕಟ್ಟೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೂಡಿಕೆತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಳಗ್ಗೆ 09:50ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 1,250 ಅಂಕಗಳ (ಶೇ. 2.15) ನಷ್ಟದಲ್ಲಿದ್ದು, 57 ಸಾವಿರ ಅಂಕಗಳ ಕೆಳಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ ಪ್ರೀ-ಓಪನ್‌ನಿಂದಲೂ ಕುಸಿತದಲ್ಲಿದೆ. ಒಂದು ಹಂತದಲ್ಲಿ 450ಕ್ಕೂ ಹೆಚ್ಚು ಅಂಕ ಕುಸಿದಿತ್ತು. ಬೆಳಗ್ಗೆ 09:50ಕ್ಕೆ ನಿಫ್ಟಿ ಸುಮಾರು 390 ಅಂಕ ಇಳಿಕೆಯಾಗಿ 17 ಸಾವಿರದ ಕೆಳಗೆ ವಹಿವಾಟು ನಡೆಸುತ್ತಿದೆ.
ಬಜೆಟ್ ಬಳಿಕ ಷೇರು ಮಾರುಕಟ್ಟೆ ಚೇತರಿಕೆ ಕಾಣಲಿದೆ ಎಂದು ನಂಬಲಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ. ಕಳೆದ ವಾರ, ಶೀಘ್ರದಲ್ಲೇ ಅಮೆರಿಕ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಊಹೆ ಮೇಲೆ ಮಾರುಕಟ್ಟೆಯ ಕಳೆಯನ್ನು ನುಂಗಿ ಹಾಕಿತ್ತು. ಈಗ ಉಕ್ರೇನ್ ಬಿಕ್ಕಟ್ಟು ಮಾರುಕಟ್ಟೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರುವ ಸಾಧ್ಯತೆ ಇದೆ ಎಂದು ಅಮೆರಿಕ ಪದೇ ಪದೇ ಹೇಳುತ್ತಿದೆ. ಈ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲವು 7 ವರ್ಷಗಳ ಗರಿಷ್ಠ ಮಟ್ಟಕ್ಕೆ ಹೋಗಿದ್ದು, ಪ್ರತಿ ಬ್ಯಾರೆಲ್‌ಗೆ $ 100 ಮಟ್ಟವನ್ನು ದಾಟುವ ಸಾಧ್ಯತೆ ಇದೆ ಎಂದು ಹೂಡಿಕೆದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಊಹೆ ನಿಜವಾದ್ರೆ, ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಮೇಲೆ ಕರಾಳ ಛಾಯೆ ಆವರಿಸಲಿದೆ.
ಕಳೆದ ವಾರವೂ ಪರಿಸ್ಥಿತಿ ಹದಗೆಟ್ಟಿತ್ತು
ಕಳೆದ ವಾರದ ಕೊನೆಯ ದಿನ ಅಂದರೆ ಶುಕ್ರವಾರದಂದು ಮಾರುಕಟ್ಟೆ 1000 ಅಂಶಗಳಷ್ಟು ಕುಸಿದಿತ್ತು. ಬಳಿಕ ಕೊಂಚ ಚೇತರಿಕೆ ಕಂಡುಬಂದಿತ್ತು. ಸೆನ್ಸೆಕ್ಸ್ 773.11 (ಶೇ. 1.31) ಕುಸಿದು 58,152.92 ಅಂಕಗಳಿಗೆ ತಲುಪಿತ್ತು. ಇನ್ನೊಂದೆಡೆ ಅದೇ ರೀತಿ ನಿಫ್ಟಿ 231.10 ಅಂಕ (ಶೇ. 1.31) ಇಳಿಕೆಯಾಗಿ 17,374.75ಕ್ಕೆ ಮುಕ್ತಾಯವಾಗಿತ್ತು.