ಅಂತರರಾಷ್ಟ್ರೀಯ

ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್‌ ಪ್ರಧಾನಿ … !?

ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್‌ ಪ್ರಧಾನಿ … !?

ಲಂಡನ್, ಜ 15  ಬ್ರಿಟನ್‌ ಪ್ರಧಾನ ಮಂತ್ರಿ ಹುದ್ದೆ ಭಾರತೀಯ ಮೂಲದ ವ್ಯಕ್ತಿಗೆ ಲಭಿಸಲಿದೆಯೇ ? ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಮುಂದಿದ್ದಾರೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಇತಿಹಾಸ ಸೃಷ್ಟಿಸಲಿದ್ದಾರಾ? ಈ ಪ್ರಶ್ನೆಗಳು ಬ್ರಿಟನ್‌ನಲ್ಲಿ ಹರಿದಾಡುತ್ತಿವೆ. ಬ್ರಿಟನ್‌ನಲ್ಲಿ ಕೊರೊನಾ ಮೊದಲ ಅಲೆಯ ಲಾಕ್‌ ಡೌನ್‌ ಜಾರಿಯಲ್ಲಿದ್ದಾಗ 2020 ಮೇ ನಲ್ಲಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ನೀಡಿದ್ದ ಮದ್ಯದ ಪಾರ್ಟಿ ವಿವಾದ ಸೃಷ್ಟಿಸಿದೆ.

ಕೋವಿಡ್ ನಿಯಮಗಳ ಉಲ್ಲಂಘಿಸಿ ಬೋರಿಸ್‌ ಜಾನ್ಸನ್‌ ನೀಡಿದ್ದ ಮದ್ಯ ಪಾರ್ಟಿ ವೀಡಿಯೊವೊಂದು ಇತ್ತೀಚಿಗೆ ಬೆಳಕಿಗೆ ಬರುವ ಮೂಲಕ ವಿರೋಧ ಪಕ್ಷ ಲೇಬರ್ ಪಾರ್ಟಿ, ಸ್ವಂತ ಪಕ್ಷ ಕನ್ಸರ್ವೇಟಿವ್ಸ್‌ನಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡಿದೆ. ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್‌ 17ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್‌ನಲ್ಲಿ 30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪ ಬಂದಿವೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.

“ಪಾರ್ಟಿ ಗೇಟ್” ವಿವಾದದ ಬಗ್ಗೆ ಬೋರಿಸ್ ಜಾನ್ಸನ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ, ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಪ್ರಧಾನಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ. ಈ ಸಂಬಂಧ ಬೆಟ್ಟಿಂಗ್ ಗಳು ನಡೆಯುತ್ತಿದೆ. ಬೋರಿಸ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಕ್ಷಮೆಯಾಚಿಸುವ ಸಮಯದಲ್ಲಿ ರಿಷಿ ಹೌಸ್‌ನಲ್ಲಿ ಇಲ್ಲದಿರುವುದು ಈ ಪ್ರಚಾರಕ್ಕೆ ಮತ್ತಷ್ಟು ಇಂಬು ನೀಡುತ್ತದೆ.

ಹಣಕಾಸು ಸಚಿವರಾದಾಗಿನಿಂದ ರಿಷಿ ಪ್ರಧಾನಿ ಹುದ್ದೆಯ ಬಗ್ಗೆ ತೀವ್ರ ಉತ್ಸುಕರಾಗಿದ್ದಾರೆ. ಹಾಗಾಗಿ “ಪಾರ್ಟಿಗೇಟ್” ವಿವಾದದಿಂದ ದೂರ ಇರಬೇಕೆಂಬ ಉದ್ದೇಶದಿಂದ ಹೌಸ್‌ ಗೆ ಹಾಜರಾಗಿರಲಿಲ್ಲ ಎಂದು ಬೋರಿಸ್ ಆಪ್ತರು ಹೇಳುತ್ತಾರೆ. ಈ ಹೇಳಿಕೆಯನ್ನು ತಳ್ಳಿ ಹಾಕಿರುವ ರಿಷಿ ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿರುವ ಕಾರಣ ಹೌಸ್‌ ಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ ನಿಂದಾಗಿ ನಿರಂತರ ಲಾಕ್‌ಡೌನ್‌ಗಳಿಂದ ಬಳಲುತ್ತಿರುವ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ರಿಷಿ ಹಲವಾರು ಕ್ರಮಗಳನ್ನು ಕೈಕೊಳ್ಳುತ್ತಿದ್ದಾರೆ. ಬ್ರಿಟನ್‌ನಲ್ಲಿ ಹುಟ್ಟಿ ಬೆಳೆದ ರಿಷಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಸುದ್ದಿ ಓದಿ