ಮನೂ ಭಾಕರ್ ನೇತೃತ್ವದಲ್ಲಿ ಏಷ್ಯನ್ ಗೇಮ್ಸ್ 2026ಕ್ಕೆ ಭಾರತೀಯ ಶೂಟಿಂಗ್ ತಂಡ
ನವದೆಹಲಿ, ಜೂನ್ 12: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ 2026ರ ಏಷ್ಯನ್ ಗೇಮ್ಸ್‌ಗೆ ಭಾರತ ಶೂಟಿಂಗ್ ತಂಡದ ಮುಂಚೂಣಿಯಲ್ಲಿದ್ದಾರೆ. ಈ ಕ್ರೀಡಾಕೂಟ ಜಪಾನ್‌ನ ಐಚಿ-ನಾಗೊಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ.
ಭಾರತದ 30 ಸದಸ್ಯರ ಶೂಟಿಂಗ್ ತಂಡವನ್ನು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಘೋಷಿಸಿದೆ. ಈ ತಂಡದಲ್ಲಿ ಪುರುಷರು ಮತ್ತು ಮಹಿಳೆಯರು ತಲಾ 15 ಜನರಂತೆ ಸಮಾನ ಸಂಖ್ಯೆಯಲ್ಲಿ ಇದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ನಡೆಸಲಾಗಿದೆ.
ಮನು ಭಾಕರ್ ಜೊತೆಗೆ ಒಲಿಂಪಿಯನ್ ರುದ್ರಾಂಕ್ಷ್ ಪಾಟೀಲ್ ಮತ್ತು ಇಶಾ ಸಿಂಗ್ ತಂಡದ ಪ್ರಮುಖ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ವಿಡರ್ಸಾ ವಿನೋದ್ ಕೂಡ ತಂಡದಲ್ಲಿ ಸೇರಿದ್ದು, ಹಲವು ಈವೆಂಟ್‌ಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.
ರೈಫಲ್ ಮತ್ತು ಪಿಸ್ತೂಲ್ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಹಾಗೂ ಐಎಸ್‌ಎಸ್‌ಎಫ್ ವಿಶ್ವಕಪ್ ಚಿನ್ನದ ಪದಕ ವಿಜೇತೆ ಸುರುಚಿ ಸಿಂಗ್ ಕೂಡ ತಂಡದಲ್ಲಿದ್ದಾರೆ. ಶಾಟ್‌ಗನ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರು ತಂಡವನ್ನು ಪೂರೈಸಿದ್ದಾರೆ.
ಆದರೆ ಕೆಲವು ಪ್ರಮುಖ ಆಟಗಾರರು ಈ ಬಾರಿ ತಂಡದಿಂದ ಹೊರಗುಳಿದಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸಿಫ್ಟ್ ಕೌರ್ ಸಮ್ರಾ, ಪ್ಯಾರಿಸ್ 2024 ಪದಕ ವಿಜೇತ ಸರಬ್ಜೋತ್ ಸಿಂಗ್ ಮತ್ತು ಸ್ವಪ್ನಿಲ್ ಕುಸಾಲೆ, ಹಾಗೆಯೇ 10 ಮೀಟರ್ ಏರ್ ಪಿಸ್ತೂಲ್ ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಶೂಟಿಂಗ್ ಸ್ಪರ್ಧೆಗಳು 2026ರ ಏಷ್ಯನ್ ಗೇಮ್ಸ್‌ನಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 3ರವರೆಗೆ ಐಚಿ ಪ್ರಿಫೆಕ್ಚುರಲ್ ಜನರಲ್ ಶೂಟಿಂಗ್ ರೇಂಜ್‌ನಲ್ಲಿ ನಡೆಯಲಿವೆ. ಹಿಂದಿನ ಆವೃತ್ತಿಯಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದು ತನ್ನ ಅತ್ಯುತ್ತಮ ಸಾಧನೆಯನ್ನು ದಾಖಲಿಸಿತ್ತು.