ಅಂತರರಾಷ್ಟ್ರೀಯ

ಅಮೆರಿಕಾ- ಕೆನಡಾ ಗಡಿಯಲ್ಲಿ ಭಾರತೀಯ ಕುಟುಂಬ ಬಲಿ

ಅಮೆರಿಕಾ- ಕೆನಡಾ ಗಡಿಯಲ್ಲಿ ಭಾರತೀಯ ಕುಟುಂಬ ಬಲಿ

ನ್ಯೂಯಾರ್ಕ್, ಜ 22  – ರಕ್ತ ಹೆಪ್ಪುಗಟ್ಟುವಂತಹ ಚಳಿ. ಮೈನಸ್ 36 ಡಿಗ್ರಿ ಸೆಲ್ಸಿಯಸ್ ತಾಪಮಾನ, ಎಲ್ಲೆಲ್ಲೂ ಹಿಮ .. ಜೊತೆಗೆ ಭಾರಿ ಹಿಮಪಾತ, ಇಂತಹ ಭೀಕರ ವಾತಾವರಣದಲ್ಲಿ .. ಕೆನಡಾದಿಂದ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ನಾಲ್ವರು ಸದಸ್ಯರ ಭಾರತೀಯ ಕುಟುಂಬವೊಂದು ಯತ್ನಿಸಿದೆ. ಪತಿ, ಪತ್ನಿ ಒಂದು ಪುಟ್ಟ ಮಗು, ಹದಿಹರೆಯದ ಬಾಲಕ ಇವರಲ್ಲಿ ಸೇರಿದ್ದು, ಎಷ್ಟೇ ಪ್ರಯತ್ನ ಪಟ್ಟರೂ ಹೆಜ್ಜೆ ಮುಂಡಿಲಾಗದ ಪರಿಸ್ಥಿತಿ.. ಕೊನೆಗೆ ಆ ಕುಟುಂಬ ಹಿಮಪಾತಕ್ಕೆ ಸಿಲುಕಿ.. ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಸಾವನ್ನಪ್ಪಿದೆ.

ಅಮೆರಿಕ, ಕೆನಡಾ ಗಡಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಎಮರ್ಸನ್ ಗಡಿಯಲ್ಲಿ ಮಧ್ಯ ರಾತ್ರಿ ಅಮೆರಿಕಾ ಪ್ರವೇಶಿಸಲು ನಡೆಸಿದ ಯತ್ನದಲ್ಲಿ ತೀವ್ರ ಹವಾಮಾನ ಪರಿಸ್ಥಿತಿ ತಾಳಲಾರದೆ ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಪತಿ ಪತ್ನಿ ಹಾಗೂ ಅವರ ಇಬ್ಬರು ಮಕ್ಕಳು ಎಂದು ಶಂಕಿಸಲಾಗಿದೆ. ಇವರೆಲ್ಲರೂ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ಪ್ರಯತ್ನಿಸಿ, ತೀವ್ರ ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಮೃತ ದೇಹಗಳು ಗಡಿಯಿಂದ 40 ಅಡಿ ದೂರದಲ್ಲಿ ಹಿಮದಲ್ಲಿ ಪತ್ತೆಯಾಗಿವೆ.

ಇದಕ್ಕೂ ಮೊದಲು, ಅಮೆರಿಕಾ ಗಡಿ ಭಾಗದಲ್ಲಿ ಇಬ್ಬರು ಭಾರತೀಯರೊಂದಿಗೆ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಸ್ಟೀವ್ ಸ್ಯಾಂಡ್ ಎಂಬ 47 ವರ್ಷದ ವ್ಯಕ್ತಿಯನ್ನು ಅಮೆರಿಕಾ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದವು. ಆ ವ್ಯಾನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ತಿನಿಸುಗಳು, ಮತ್ತಿತರ ವಸ್ತುಗಳನ್ನು ಗುರುತಿಸಿದ ಅಮೆರಿಕಾ ಪಡೆಗಳು ಇನ್ನೂ ಹೆಚ್ಚಿನ ಮಂದಿ ಗಡಿ ದಾಟಬಹುದು ಎಂದು ಶಂಕಿಸಿ, ಜಾಗೃತೆ ವಹಿಸುವಂತೆ ಕೆನಡಾದ ಗಡಿ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಿತು, ತಕ್ಷಣ ಕಾರ್ಯಪ್ರವೃತ್ತರಾದ ಕೆನಡಾದ ಗಡಿ ರಕ್ಷಣಾ ಪಡೆಗಳು ಹಿಮದಡಿಯಲ್ಲಿ ಬಿದ್ದಿದ್ದ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಗಡಿಯಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಹದಿನೈದು ಭಾರತೀಯರ ಗುರುತಿಸಿ ಅವರನ್ನು ವಿಚಾರಣೆ ನಡೆಸಲಾಯಿತು. ಯಾವುದೇ ದಾಖಲೆಗಳಿಲ್ಲದೆ ತಮ್ಮನ್ನು ಅಮೆರಿಕಾಗೆ ಅಕ್ರಮವಾಗಿ ಸಾಗಿಸಲು ವ್ಯಕ್ತಿಯೊಬ್ಬರು ಒಪ್ಪಂದ ಮಾಡಿಕೊಂಡಿದ್ದರು ಎಂದು, ಅವರು ಕೆನಡಾದ ಗಡಿ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಗಡಿ ದಾಟಲು ಈ ಮಾರ್ಗ ತೋರಿಸಿದ್ದರು. ಗಡಿ ದಾಟಿದ ನಂತರ ನಮ್ಮನ್ನು ಕರದುಕೊಂಡು ಹೋಗುವುದಾಗಿ ಹೇಳಿದ್ದರು ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಅಮೆರಿಕಾ ಪಡೆಗಳು ಸ್ಟೀವ್ ಸ್ಯಾಂಡ್ ಭಾಗಿಯಾಗಿದ್ದಾನೆ ಎಂದು ಗುರುತಿಸಿ, ಆತನ ವಿರುದ್ಧ ಮಾನವ ಕಳ್ಳಸಾಗಣೆ ಅಡಿ ಪ್ರಕರಣ ದಾಖಲಿಸಿದೆ.

ಸುದ್ದಿ ಓದಿ