ಅಂತರರಾಷ್ಟ್ರೀಯ

ಮೀನುಗಾರರು, ಕೈದಿಗಳ ಶೀಘ್ರ ಬಿಡುಗಡೆಗೆ ಪಾಕ್‍ಗೆ ವಿನಂತಿಸಿದ ಭಾರತ

ಮೀನುಗಾರರು, ಕೈದಿಗಳ ಶೀಘ್ರ ಬಿಡುಗಡೆಗೆ ಪಾಕ್‍ಗೆ ವಿನಂತಿಸಿದ ಭಾರತ

ನವದೆಹಲಿ, ಜನವರಿ 01: ಪಾಕಿಸ್ತಾನದ ವಶದಲ್ಲಿರುವ 356 ಭಾರತೀಯ ಮೀನುಗಾರರು ಮತ್ತು ಇಬ್ಬರು ನಾಗರಿಕ ಕೈದಿಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪಾಕಿಸ್ತಾನಕ್ಕೆ ಕರೆ ನೀಡಿದ್ದು, ಈಗಾಗಲೇ ಇವರೆಲ್ಲರ ರಾಷ್ಟ್ರೀಯತೆಯನ್ನು ದೃಢೀಕರಿಸಲಾಗಿದೆ ಎಂದು ಹೇಳಿದೆ.

ಪಾಕಿಸ್ತಾನದ ವಶದಲ್ಲಿರುವ 182 ಭಾರತೀಯ ಮೀನುಗಾರರು ಮತ್ತು 17 ನಾಗರಿಕ ಕೈದಿಗಳಿಗೆ ತಕ್ಷಣದ ಕಾನ್ಸುಲರ್ ಪ್ರವೇಶವನ್ನು ಒದಗಿಸುವಂತೆ ಪಾಕಿಸ್ತಾನವನ್ನು ಕೇಳಲಾಗಿದೆ ಎಂದು ಎಂಇಎ ತಿಳಿಸಿದೆ.

2008ರ ಒಪ್ಪಂದದ ಚೌಕಟ್ಟಿನ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ವರ್ಷದ ಜನವರಿ 1 ಮತ್ತು ಜುಲೈ 1 ರಂದು ಎರಡೂ ದೇಶಗಳು ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಈ ನಿಯಮದ ಅಡಿಯಲ್ಲಿ ಭಾರತವು ಪಾಕಿಸ್ತಾನಕ್ಕೆ ವಿನಂತಿಸಿದೆ.

ಭಾರತದ ವಶದಲ್ಲಿರುವ 282 ಪಾಕ್ ನಾಗರಿಕ ಕೈದಿಗಳು ಮತ್ತು 73 ಮೀನುಗಾರರ ಪಟ್ಟಿಯನ್ನು ಭಾರತವು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ಅಂತೆಯೇ, ಪಾಕಿಸ್ತಾನವು ತನ್ನ ವಶದಲ್ಲಿರುವ 51 ನಾಗರಿಕ ಕೈದಿಗಳು ಮತ್ತು 577 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ, ಅವರು ಭಾರತೀಯರು ಎಂದು ನಂಬಲಾಗಿದೆ.

ವೈದ್ಯಕೀಯ ತಜ್ಞರ ತಂಡದ ಸದಸ್ಯರಿಗೆ ವೀಸಾಗಳ ಮಂಜೂರಾತಿಯನ್ನು ತ್ವರಿತಗೊಳಿಸುವಂತೆ ಮತ್ತು ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧಿಯಾಗಿರುವ ಭಾರತೀಯ ಖೈದಿಗಳ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಲು ಸರ್ಕಾರವು ಪಾಕಿಸ್ತಾನವನ್ನು ವಿನಂತಿಸಿದೆ. ಪಾಕಿಸ್ತಾನಕ್ಕೆ ಜಂಟಿ ನ್ಯಾಯಾಂಗ ಸಮಿತಿಯ ಆರಂಭಿಕ ಭೇಟಿಯನ್ನು ಆಯೋಜಿಸಲು ಸಹ ಪ್ರಸ್ತಾಪಿಸಲಾಗಿದೆ ಎಂದು ಹೇಳಿದೆ.

ಈ ಸಂದರ್ಭದಲ್ಲಿ, ಮೀನುಗಾರರು ಸೇರಿದಂತೆ 68 ಪಾಕಿಸ್ತಾನಿ ಕೈದಿಗಳ ರಾಷ್ಟ್ರೀಯತೆಯನ್ನು ಖಚಿತಪಡಿಸಲು ಭಾರತವು ಪಾಕಿಸ್ತಾನವನ್ನು ಒತ್ತಾಯಿಸಿದೆ ಎಂದು ಎಂಇಎ ಹೇಳಿದೆ.

ಸುದ್ದಿ ಓದಿ