ವಿಶ್ವ ಸಂಸ್ಥೆ ವೇದಿಕೆಯಲ್ಲಿ ಚೀನಾಕ್ಕೆ ಭಾರತದ ಪಂಚ್....!
ವಿಶ್ವಸಂಸ್ಥೆ, ನ 10: ಪ್ರಪಂಚದ ದೇಶಗಳ ಬೆಂಬಲಕ್ಕೆ ಭಾರತ ಸದಾ ನಿಲ್ಲಲಿದೆ. ಆಯಾ ದೇಶಗಳ ಆದ್ಯತೆಗಳನ್ನು ಗೌರವಿಸುವುದರೊಂದಿಗೆ ಅವುಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ವಿಶ್ವ ಸಂಸ್ಥೆಗೆ ಹೇಳಿದೆ.
ಆದರೆ, ನೆರವಿನ ಹೆಸರಿನಲ್ಲಿ ಆ ದೇಶಗಳ ಮೇಲೆ ಸಾಲದ ಹೊರೆ ಹೇರುವುದಿಲ್ಲ ಎಂದು ಚೀನಾಕ್ಕೆ ಪರೋಕ್ಷವಾಗಿ ಕೌಂಟರ್ ನೀಡಿದೆ.
"ಅಂತರ ರಾಷ್ಟ್ರೀಯ ಶಾಂತಿ ಭದ್ರತೆಗಳ ನಿರ್ವಹಣೆ; ವಿನಾಯಿತಿಗಳು, ಅಸಮಾನತೆಗಳು, ಸಂಘರ್ಷಗಳು " ಎಂಬ ವಿಷಯದ ಮೇಲೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡಾ. ರಾಜ್‌ಕುಮಾರ್ ರಂಜನ್ ಸಿಂಗ್ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ನೆರೆಯ ದೇಶ ಚೀನಾ ವಿರುದ್ದ ಪರೋಕ್ಷವಾಗಿ ಟೀಕೆಗಳ ಸುರಿಮಳೆಗೈದರು. "ನೆರೆಯ ರಾಷ್ಟ್ರಗಳಾಗಲಿ, ಆಫ್ರಿಕನ್ ಪಾಲುದಾರರಾಗಲಿ ಅಥವಾ ಅಥವಾ ಇತರ ಅಭಿವೃದ್ಧಿಶೀಲ ರಾಷ್ಟ್ರಗಳೇ ಇರಲಿ ಭಾರತ ಸದಾ ಅವರ ಬೆಂಬಲವಾಗಿ ನಿಲ್ಲಲಿದೆ. ಆ ದೇಶಗಳು ಹೆಚ್ಚು ಚೇತರಿಸಿಕೊಳ್ಳಲು ಸಾಧ್ಯವಾಗುವಂತಹ ಅಗತ್ಯದ ಸಹಾಯ ನೀಡುವುದನ್ನು ಮುಂದುವರಿಲಿದೆ. ಆಯಾ ದೇಶಗಳ ಆದ್ಯತೆಗಳನ್ನೂ ಗೌರವಿಸುತ್ತದೆ. ನಾವು ಒದಗಿಸುವ ನೆರವು ಬೇಡಿಕೆ ಆಧರಿಸಿದೆ. ಇದು ಉದ್ಯೋಗ ಸೃಷ್ಟಿ ಹಾಗೂ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ. ಇದರ ಹೊರತು ಆ ದೇಶಗಳ ಮೇಲೆ ಸಾಲದ ಹೊರೆಯನ್ನು ಸೃಷ್ಟಿಸುವುದಿಲ್ಲ, ”ಎಂದು ಅವರು ಚೀನಾ ಉದ್ದೇಶಿಸಿ ಪರೋಕ್ಷ ಹೇಳಿಕೆ ನೀಡಿದರು.
ಚೀನಾ ತನ್ನ ಬೆಲ್ಟ್ ಅಂಡ್ ರೋಡ್ ಯೋಜನೆ ಬಳಸಿ ದೇಶಗಳನ್ನು ಸಾಲದ ಬಲೆಗೆ ತಳ್ಳಲು ನೋಡುತ್ತಿದೆ. ಆ ಮೂಲಕ ಪ್ರಾದೇಶಿಕ ಪ್ರಾಬಲ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವದಾದ್ಯಂತ ಕಳವಳ ವ್ಯಕ್ತವಾಗುತ್ತಿದೆ. ಏಷ್ಯಾದಿಂದ ಆಫ್ರಿಕಾದವರೆಗೆ ಹಲವು ದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ಚೀನಾ ಬೃಹತ್ ಮೊತ್ತದ ಹಣ ವ್ಯಯಿಸುತ್ತಿದೆ. ಬೆಲ್ಟ್ ಅಂಡ್ ರೋಡ್ ಯೋಜನೆ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಹಲವು ಬಾರಿ ಟೀಕಿಸಿದ್ದರು. ಈ ಯೋಜನೆಗೆ ಚೀನಾ ಬೃಹತ್ ಹಣ ಒದಗಿಸುವ ಮೂಲಕ ಸಣ್ಣ ದೇಶಗಳನ್ನು ಸಾಲದ ಬಲೆಗೆ ತಳ್ಳುತ್ತಿದೆ ಎಂದು ಅವರು ಆರೋಪಿಸಿದ್ದರು. ಇದು ಆಯಾ ದೇಶಗಳ ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ಷೇಪಿಸಿದ್ದರು. ಭಾರತ ಇದೇ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಚೀನಾಕ್ಕೆ ಕೌಂಟರ್ ನೀಡಿದೆ.