ಭಾರತಕ್ಕೆ ಎಸ್ -400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಆರಂಭ; ರಷ್ಯಾ ಸರ್ಕಾರ
ದುಬೈ, ನ 14 - ಭಾರತಕ್ಕೆ ಎಸ್- 400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಷ್ಯಾ ಸರ್ಕಾರ ಹೇಳಿದೆ. ಪೂರೈಕೆ ಪ್ರಕ್ರಿಯೆ ಯೋಜಿಸಿದಂತೆ ನಡೆಯುತ್ತಿವೆ ಎಂದು ರಷ್ಯಾದ ಸೇನಾ -ತಾಂತ್ರಿಕ ಸಹಕಾರ ಕುರಿತ ಫೆಡರಲ್ ಸೇವೆ (ಎಫ್ ಎಸ್ ಎಂ ಟಿ ಸಿ)ಗಳ ನಿರ್ದೇಶಕ ಡಿಮಿಟ್ರಿ ಶುಗೇವ್ ದುಬೈ ಏರ್‌ಶೋಗೆ ಮುನ್ನ "ಸ್ಪುಟ್ನಿಕ್"ಗೆ ತಿಳಿಸಿದ್ದಾರೆ.
ಭಾರತಕ್ಕೆ ಎಸ್- 400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಸರಬರಾಜು ಪ್ರಾರಂಭವಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುತ್ತಿದೆ ಎಂದು ಶುಗೇವ್ ಹೇಳಿದರು.
ಈಗಾಗಲೇ ಚೀನಾ , ಟರ್ಕಿಯಲ್ಲಿ ಎಸ್ - 400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಸೇವೆಗೆ ಪ್ರವೇಶಿಸಿದೆ. 2018 ಅಕ್ಟೋಬರ್ ನಲ್ಲಿ ರಷ್ಯಾ ಹಾಗೂ ಭಾರತ ಎಸ್ - 400 ಪೂರೈಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದವು.
ಆಗಸ್ಟ್‌ನಲ್ಲಿ, ರಷ್ಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ರಫ್ತುದಾರ ಸಂಸ್ಥೆ ರೊಸೊಬೊರೊನೆಕ್ಸ್‌ಪೋರ್ಟ್ ಮುಖ್ಯಸ್ಥ ಅಲೆಕ್ಸಾಂಡರ್ ಮಿಖೀವ್ , ಎಸ್ - 400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆ ಸಂಬಂಧ ಮಧ್ಯಪ್ರಾಚ್ಯ, ಏಷ್ಯಾ-ಪೆಸಿಫಿಕ್ ಪ್ರದೇಶ ಹಾಗೂ ಆಫ್ರಿಕಾದ ಏಳು ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸ್ಪುಟ್ನಿಕ್ ಗೆ ಹೇಳಿದ್ದರು.
ಒಟ್ಟು ಐದು ಎಸ್-400 ವ್ಯವಸ್ಥೆಗಳ ಖರೀದಿಗೆ 2018ರ ಅಕ್ಟೋಬರ್‌ನಲ್ಲಿ ಭಾರತ-ರಷ್ಯಾ ಸುಮಾರು 37 ಸಾವಿರ ಕೋಟಿ ರೂ. ಮೊತ್ತದ ಒಡಂಬಡಿಕೆ ಮಾಡಿಕೊಂಡಿವೆ.
2018ರಲ್ಲಿ ಎಸ್- 400 ಖರೀದಿ ಒಪ್ಪಂದಕ್ಕೆ ಸಹಿ ವೇಳೆಯೇ ಹಿಂದೆ ಸರಿಯುವಂತೆ ಭಾರತದ ಮೇಲೆ ಅಮೆರಿಕ ಭಾರಿ ಒತ್ತಡ ಹೇರಿತ್ತು. ಇದು ಫಲಿಸದಿದ್ದಾಗ ಕಳೆದ ತಿಂಗಳು ರಷ್ಯಾ ಜೊತೆಗೆ ಭಾರತ ಮಾಡಿಕೊಂಡ ಬೇಸಿಕ್ ಎಕ್ಸ್‌ಚೇಂಜ್ ಹಾಗೂ ಸಹಕಾರ ಒಪ್ಪಂದ (ಬಿಇಸಿಎ) ಬಗ್ಗೆಯೂ ಅಮೆರಿಕ ಅಸಮಾಧಾನ ವ್ಯಕ್ತಪಡಿಸಿ, ನಿರ್ಬಂಧ ಹೇರುವ ಎಚ್ಚರಿಕೆ ನೀಡಿತ್ತು.