ಕಾಮನ್ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮೊದಲ ಬೆಳ್ಳಿ ಪದಕ!
ಬರ್ಮಿಂಗ್ಹ್ಯಾಮ್: ಜುಲೈ 30: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮೊದಲ ದಿನ ಭಾರತ ಯಾವುದೇ ಪದಕ ಗೆಲ್ಲಲಿಲ್ಲ, ಆದರೆ ಎರಡನೇ ದಿನ ಸಂಕೇತ್ ಮಹಾದೇವ್ ಸರ್ಗರ್ ಭಾರತಕ್ಕೆ ವೇಟ್ಲಿಫ್ಟಿಂಗ್ನಲ್ಲಿ ಮೊದಲ ಪದಕವನ್ನು ಗೆಲ್ಲಿಸಿಕೊಡುವಲ್ಲಿ ಸಫಲರಾದರು. ಮಹಾರಾಷ್ಟ್ರದ ಸಾಂಗ್ಲಿಯ 21 ವರ್ಷದ ಸಂಕೇತ್, 55 ಕೆಜಿ ತೂಕದ ವಿಭಾಗದಲ್ಲಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಆರಂಭಗೊಂಡಿದೆ.
ಮಲೇಷ್ಯಾದ ಮೊಹಮದ್ ಅನಿಕ್ 249 ಕೆಜಿ (107 ಕೆಜಿ + 142 ಕೆಜಿ) ಎತ್ತುವ ಮೂಲಕ ಚಿನ್ನದ ಪದಕ ಗೆದ್ದು ಎರಡನೇ ಸ್ಥಾನಕ್ಕೆ ತಳ್ಳಿದರು. ಶ್ರೀಲಂಕಾದ ದಿಲಂಕಾ ಇಸುರು ಕುಮಾರ 225 ಕೆಜಿ (105 ಕೆಜಿ + 120 ಕೆಜಿ) ಎತ್ತುವ ಮೂಲಕ ಕಂಚಿನ ಪದಕ ಪಡೆದರು.