ಇಮ್ರಾನ್ ಸರಕಾರ ಉರುಳಿಸಲು ಭಾರತ ಪಿತೂರಿ! ಪಾಕ್ ಆರೋಪ
ಇಸ್ಲಾಮಾಬಾದ್: ಮಾರ್ಚ್ 31 : “ಕುಣಿಯಕ್ಕೆ ಬರಲಿಲ್ಲ ಅಂದ್ರೆ ನೆಲ ಡೊಂಕು” ಅನ್ನೋ ಗಾದೆ ಮಾತು ಬಹಳ ಪ್ರಚಲಿತದಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ಪಾಕಿಸ್ತಾನ. ಪಾಕಿಸ್ತಾನ ಆಡಳಿತರೂಢ ಸರಕಾರ, ತನ್ನ ವೈಫಲ್ಯಕ್ಕೆ ಭಾರತವನ್ನು ದೂಷಣೆ ಮಾಡಿದೆ.
ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವ ಪ್ರಯತ್ನದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಆರೋಪಿಸಿದ್ದಾರೆ. ಫವಾದ್ ಚೌಧರಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಲಂಡನ್‌ನಲ್ಲಿ ಕುಳಿತು ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಲು ನವಾಜ್ ಷರೀಫ್ ಪ್ರಯತ್ನಿಸುತ್ತಿದ್ದಾರೆ. ಭಾರತದೊಂದಿಗೆ ನವಾಜ್ ಷರೀಫ್ ಅವರ ಸಂಬಂಧ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಭಾರತ ಮತ್ತು ಇಸ್ರೇಲ್ನೊಂದಿಗೆ ನವಾಜ್ ಷರೀಫ್ ಹಲವು ಸಭೆಗಳನ್ನು ನಡೆಸಿದ್ದು ಮರೆತಿಲ್ಲ ಎಂದು ಫವಾದ್ ಚೌಧರಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಫವಾದ್ ಚೌಧರಿ ಪಾಕಿಸ್ತಾನದ ಮಾಧ್ಯಮಗಳ ಮೇಲೂ ಪ್ರಶ್ನೆಗಳನ್ನು ಎತ್ತಿದ್ದು, ಇಮ್ರಾನ್ ಸರ್ಕಾರವನ್ನು ಉರುಳಿಸುವ ಪಿತೂರಿಯಲ್ಲಿ ಪಾಕಿಸ್ತಾನದ ಕೆಲವು ಮಾಧ್ಯಮದವರೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರದ ಪತನ ಬಹುತೇಕ ಖಚಿತ ಎಂದು ನಂಬಲಾಗಿದೆ. ಇಮ್ರಾನ್ ಖಾನ್ ದೇಶವನ್ನುದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದ್ದು, ಈ ವೇಳೆ ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಬಂಡಾಯ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಾಗೂ ಅವಿಶ್ವಾಸ ನಿರ್ಣಯವನ್ನು ವಾಪಸ್ ಪಡೆಯದಿದ್ದರೆ ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜಿಸುವುದಾಗಿ ಇಮ್ರಾನ್ ಖಾನ್ ಬೆದರಿಕೆ ಹಾಕುತ್ತಿದ್ದಾರೆ ಎಂತಲೂ ವರದಿಯಲ್ಲಿ ಹೇಳಿವೆ.
ಈ ಬೆದರಿಕೆ ನಂತರ ಅವಿಶ್ವಾಸ ಗೊತ್ತುವಳಿ ಪ್ರಸ್ತಾಪಿಸಿರುವ ವಿರೋಧ ಪಕ್ಷಗಳು ಹಾಗೂ ತೆಹ್ರಿಕ್-ಎ-ಇನ್ಸಾಫ್ ಪಾರ್ಟಿಯ ಬಂಡಾಯ ಸದಸ್ಯರು ಸಭೆ ನಡೆಸುತ್ತಿದ್ದಾರೆ.