ಅಂತರರಾಷ್ಟ್ರೀಯ

ನಾವು ಪ್ರತಿಕ್ರಿಯೆ ನೀಡುವ ಮೊದಲೇ ಭಾರತ ಬ್ರಹ್ಮೋಸ್‌ ದಾಳಿ ಮಾಡಿತ್ತು: ಪಾಕ್‌ ಪ್ರಧಾನಿ

ನಾವು ಪ್ರತಿಕ್ರಿಯೆ ನೀಡುವ ಮೊದಲೇ ಭಾರತ ಬ್ರಹ್ಮೋಸ್‌ ದಾಳಿ ಮಾಡಿತ್ತು: ಪಾಕ್‌ ಪ್ರಧಾನಿ

ಅಜೆರ್ಬೈಜಾನ್‌ 29: ಮೇ 9-10ರ ಮಧ್ಯರಾತ್ರಿ ಭಾರತವು ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಬ್ರಹ್ಮೋಸ್ ಕ್ಷಿಪಣಿಗಳನ್ನು ಉಡಾಯಿಸಿದಾಗ ತಮ್ಮ ಸೇನೆಗೆ ಗೊತ್ತೇ ಇರಲಿಲ್ಲ ಎಂದು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.

ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಅಸಿಮ್ ಮುನೀರ್ ನೇತೃತ್ವದ ಸೇನೆಯು ಮೇ 10 ರಂದು ಬೆಳಗಿನ ಪ್ರಾರ್ಥನೆಯ ನಂತರ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು ಎಂದು ಹೇಳಿದರು. ಆದಾಗ್ಯೂ, ಬೆಳಗಿನ ಜಾವಕ್ಕೂ ಮುಂಚೆಯೇ, ಪಾಕಿಸ್ತಾನದ ವಿವಿಧ ಪ್ರಾಂತ್ಯಗಳ ಮೇಲೆ ದೀರ್ಘ-ಶ್ರೇಣಿಯ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಮಳೆ ಸುರಿಯಿತು ಎಂದು ಪ್ರಧಾನಿ ಷರೀಫ್ ಹೇಳಿದರು.‌

ಮೇ 9-10ರ ರಾತ್ರಿ, ನಾವು ಭಾರತದ ಆಕ್ರಮಣಕ್ಕೆ ಕ್ರಮಬದ್ಧವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದ್ದೆವು. ಫಜ್ರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 4.30 ಕ್ಕೆ ನಮ್ಮ ಸಶಸ್ತ್ರ ಪಡೆಗಳು ಪಾಠ ಕಲಿಸಲು ಸಿದ್ಧವಾಗಿದ್ದವು. ಆದರೆ ಆ ಸಮಯ ಬರುವ ಮೊದಲೇ, ಭಾರತ ಮತ್ತೊಮ್ಮೆ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿತು” ಎಂದು ಲಾಚಿನ್‌ನಲ್ಲಿ ಮಾಡಿದ ಭಾಷಣದಲ್ಲಿ ಷರೀಫ್ ಹೇಳಿದರು.


ಸುದ್ದಿ ಓದಿ