ರಾಷ್ಟ್ರ ಪರಿವರ್ತನೆಯಿಂದ ವಿಶ್ವದಲ್ಲಿ ಭಾರತಕ್ಕೆ ಮನ್ನಣೆ
ಬಿ.ವಾಯ್.ವಿಜಯೇಂದ್ರ ಹೇಳಿಕೆ: ಬಿಜೆಪಿ ಎಸ್ಟಿ ಮೋರ್ಚಾ ಬೃಹತ್ ಸಮಾವೇಶ
ಉಳ್ಳಾಗಡ್ಡಿ-ಖಾನಾಪೂರ 15: ಭಾರತವನ್ನು ಸಮೃದ್ಧ ಶಕ್ತಿಶಾಲಿ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಿದ ಪ್ರಧಾನಿ ನರೇಂದ್ರ ಮೊದಿಯವರನ್ನು ಇಡೀ ವಿಶ್ವನಾಯಕರು ಹಾಗೂ ವಿಶ್ವದ ಜನತೆ ಮೆಚ್ಚಿ ವಿಶ್ವಕ್ಕೆ ಮಾರ್ಗದರ್ಶನ ನೀಡಬೇಕೆಂಬ ಹೆಬ್ಬಯಕೆಯಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ಹೇಳಿದರು.
ಅವರು ಸಮೀಪದ ಶಹಾಬಂದರ ಗ್ರಾಮದ ಬಳಿ ಆಯೊಜಿಸಿದ್ದ ಬಿಜೆಪಿ ಎಸ್ಟಿ ಮೋರ್ಚಾದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾಶ್ಮೀರದಲ್ಲಿ 370 ವಿಧೇಯಕವನ್ನು ತೆಗೆದು ಹಾಕಿದರೆ ನಾವು ಅಲ್ಪಸಂಖ್ಯಾತರ ಮತಗಳಿಂದ ವಂಚಿತರಾಗುತ್ತೆವೆಂದು 370 ನೇಯ ವಿಧೇಯಕವನ್ನು ತೆಗೆದು ಹಾಕಲಿಲ್ಲ. ಕಾಂಗ್ರೆಸ್ ಪಕ್ಷದ ಪಾಪದ ಕೂಸಾದ 370 ನೇಯ ವಿಧೆಯಕವನ್ನು ನರೇಂದ್ರ ಮೋದಿಯವರು ತೆಗೆದುಹಾಕಿ ಅಲ್ಲಿಯ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸಿದ್ದರಿಂದ ಕಾಶ್ಮೀರದಲ್ಲಿ ಉತ್ತಮ ಆಡಳಿತ ನಡೆಯಲು ಸಾಧ್ಯವಾಗಿದೆ. 75 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ಸ್ ಪಕ್ಷದಿಂದ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಬಡವರಿಗೆ ರೈತರಿಗೆ ಶಕ್ತಿ ತುಂಬುವ ಕಾರ್ಯ ಬಿಜೆಪಿ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಅಂತಂತ್ರದಲ್ಲಿದ್ದಾಗ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರು ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದು ಬಿ.ಎಸ್.ಯಡಿಯೊರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯಸಭಾ ಸದಸ್ಯರಾದ ಈರಣ್ಣಾ ಕಡಾಡಿ ಮಾತನಾಡಿ ಪರಿವರ್ತನೆ ಜಗದ ನಿಯಮವಾಗಿದ್ದು ಕೆಲವರು ಬದಲಾವಣೆಯಾಗುವುದಿಲ್ಲ ಎಂದು ಭಾವಿಸಿಕೊಂಡು ಕ್ಷೇತ್ರದಲ್ಲಿ ತಾವೇ ಶಾಶ್ವತ ಎಂದು ತಿಳಿದಿದ್ದು ತಪ್ಪು. ಯಮಕನಮರಡಿ ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರಕಾರಗಳ ಯೋಜನೆಗಳಿಂದ ಜನರು ವಂಚಿತರಾಗಿದ್ದಾರೆ. ಇದೇ ರೀತಿ ಸಂಘಟನಾತ್ಮಕ ಕಾರ್ಯದ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವಂತೆ ಕರೆಯಿತ್ತರು.
ಸೂರಪೂರದ ಶಾಸಕರಾದ ರಾಜುಗೌಡಾ ನಾಯಿಕ ಮಾತನಾಡಿ ಮಹರ್ಷಿ ವಾಲ್ಮಿಕಿಯವರನ್ನು ಗೌರವ ನೀಡಿದ್ದು ಬಿಜೆಪಿಗರು ಮಾತ್ರ ಶೇ. 3 ರಿಂದ ಶೇ. 7 ಕ್ಕೆ ಎಸ್ಟಿ, ಮೀಸಲಾತಿ ಏರಿಸಿದ್ದು ಬಿಜೆಪಿ ಸರಕಾರದ ಸಾಧನೆ. ವಾಲ್ಮಿಕಿ ಜನರ ಅಭಿವೃದ್ಧಿಗಾಗಿ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಶಾಸಕರೆಂದರೆ ಅರಸರಲ್ಲ ಜನರ ಜೀತದಾಳಾಗಿ ಕೆಲಸ ಮಾಡುವುದೇ ಶಾಸಕರ ಕಾರ್ಯ ಎಂದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಚಿಕ್ಕೋಡಿ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲ್ ಮಾತನಾಡಿದರು. ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಠಗಿ, ಮುಖಂಡರಾದ ರವಿಂದ್ರ ಹಂಜಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡಾ ಪಾಟಿಲ, ಸಿದ್ದಲಿಂಗ ಸಿದ್ದಗೌಡರ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯಾ ಜಾಜರಿ, ಉಜ್ವಲಾ ಬಡವನಾಚೆ, ಮಂಜುನಾಥ ಒಲೇಕಾರ, ಶೇಖರಗೌಡಾ ಮೊದಗಿ, ಈರಣ್ಣಾ ಗುರವ, ಅಯೂಬಖಾನ್ ಓಂಟಿಗಾರ, ಶಿವಪ್ಪಾ ಡೊನಪಾಟೀಲ, ಶಶಿಕಾಂತ ಮಠಪತಿ, ಬಸವರಾಜ ಪೂಜೇರಿ, ಬಸವರಾಜ ಬರಗಾಲಿ, ಯಲ್ಲಪ್ಪಾ ಗಡಕರಿ, ಪ್ರವೀಣ ಕೆಂಪವಾಡ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗೌರಿ ಮಟ್ಟಿ ನಿರೂಪಿಸಿ ವಂದಿಸಿದರು.