ಪಾಕ್‌ನಲ್ಲಿ ಭಾರತದ ಕ್ಷಿಪಣಿ ಪತನ: ನಾವು ಸಂಯಮದಿಂದ ವರ್ತಿಸಿದ್ದೇವೆ – ಇಮ್ರಾನ್ ಖಾನ್
ಇಸ್ಲಾಮಾಬಾದ್: ಮಾರ್ಚ್ 14: ತಾಂತ್ರಿಕ ದೋಷದಿಂದ ಪಾಕಿಸ್ತಾನದ ಭೂಪ್ರದೇಶದಲ್ಲಿ ಭಾರತದ ಕ್ಷಿಪಣಿ ಪತನದ ವಿರುದ್ಧ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. “ಇದಕ್ಕೆ ಉತ್ತರ ನೀಡಬಹುದಿತ್ತು, ಆದರೆ ಸಂಯಮದಿಂದ ವರ್ತಿಸಿದ್ದೇವೆ” ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಭಾರತ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು ತನಿಖೆಗೆ ಆದೇಶಿಸಲಾಗಿದೆ. ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದರಿಂದ ತೃಪ್ತರಾಗಿಲ್ಲ. ಅದೃಷ್ಟವಶಾತ್ ಭಾರತದ ಕ್ಷಿಪಣಿಯಿಂದ ಪಾಕಿಸ್ತಾನದಲ್ಲಿ ಯಾವುದೇ ಹಾನಿಯಾಗಿಲ್ಲ. ಈ ಬಗ್ಗೆ ಇಮ್ರಾನ್ ಖಾನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಹಾಜಿಫಾಬಾದ್‌ನಲ್ಲಿ ರಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಮಿಯಾ ಚನ್ನು ಮೇಲೆ ಬಿದ್ದ ಭಾರತದ ಕ್ಷಿಪಣಿಗೆ ನಾವು ಪ್ರತ್ಯುತ್ತರ ನೀಡಬಹುದಿತ್ತು, ಆದರೆ ನಾವು ಸಂಯಮದಿಂದ ವರ್ತಿಸುವುದು ಸೂಕ್ತವೆಂದು ಭಾವಿಸಿದ್ದೇವೆ. ನಾವು ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ ಎಂದು ಹೇಳಿದರು. ಇದಕ್ಕೂ ಮುನ್ನ ಶನಿವಾರ ಪಾಕ್ ಸರ್ಕಾರವು ಆಕಸ್ಮಿಕ ಕ್ಷಿಪಣಿ ಉಡಾವಣೆ ಬಗ್ಗೆ ಭಾರತದ ಹೇಳಿಕೆಯಿಂದ ತೃಪ್ತರಾಗಿಲ್ಲ ಎಂದು ತಿಳಿಸಿತ್ತು.
ತಾಂತ್ರಿಕ ದೋಷದಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂಬ ಸರಳ ವಿವರಣೆ ಸಾಕಾಗಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಕ್ಷಿಪಣಿ ಪತನದ ಬಗ್ಗೆ ಜಂಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಘಟನೆಯ ಸತ್ಯವನ್ನು ಕಂಡುಹಿಡಿಯಬಹುದು. ಜಂಟಿ ತನಿಖೆಯ ಬಳಿಕ ಸತ್ಯಾಂಶ ಹೊರತರಬೇಕು ಎಂದು ಪಾಕಿಸ್ತಾನ ಭಾರತಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪಾಕಿಸ್ತಾನದಲ್ಲಿ ಭಾರತದ ಕ್ಷಿಪಣಿ ಪತನದ ಘಟನೆ 9 ಮಾರ್ಚ್ 2022 ರಂದು ನಡೆದಿದ್ದು, ತಾಂತ್ರಿಕ ದೋಷವು ಆಕಸ್ಮಿಕವಾಗಿ ಕ್ಷಿಪಣಿಯ ಉಡಾವಣೆಗೆ ಕಾರಣವಾಯಿತು. ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ರಕ್ಷಣಾ ಸಚಿವಾಲಯ ಕೂಡ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.