ರಷ್ಯಾದಲ್ಲಿ ಒಂದೇ ದಿನ 1,106 ಜನ ಕೊರೊನಾಗೆ ಬಲಿ
ಮಾಸ್ಕೋ : ಅ, 26 (ಯುಎನ್‌ಐ) ಕಳೆದ 24 ಗಂಟೆಯಲ್ಲಿ ರಷ್ಯಾದಲ್ಲಿ ಕೊರೊನಾ ಸೋಂಕಿಗೆ 1,106 ಜನ ಬಲಿಯಾಗಿದ್ದಾರೆ. ಕೊರೊನಾ ಆರಂಭವಾದಗಿನಿಂದ ಇಲ್ಲಿ ತನಕ ದಾಖಲಾದ ಅತೀ ಹೆಚ್ಚು ಸಾವಿನ ಪ್ರಕರಣ ಇದಾಗಿದೆ.
ದಿನೇ ದಿನೇ ರಷ್ಯಾದಲ್ಲಿ ಕೊರೊನಾ ಸೋಂಕಿತರ ಮತ್ತು ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್‌ಡೌನ್ ಹಾಗೂ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಕೋವಿಡ್-19 ಕಾರ್ಯಪಡೆಯು 36,446 ಹೊಸ ಸೋಂಕುಗಳನ್ನು ವರದಿ ಮಾಡಿದೆ. ಇದರ ಹಿಂದಿನ ದಿನ 37,930 ಮಂದಿಗೆ ಸೋಂಕು ತಗುಲಿತ್ತು. ಒಟ್ಟಿನಲ್ಲಿ ಕಳೆದ ಎಂಟು ದಿನಗಳಿಂದ ರಷ್ಯಾದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.
ರಷ್ಯಾದಲ್ಲಿ ನವೆಂಬರ್ ಮೊದಲ ವಾರದಿಂದ ಕಚೇರಿಗೆ ಬಂದು ಕೆಲಸ ಮಾಡುವುದನ್ನು ಸ್ಥಗಿತಗೊಳಿಸಲಾಗುವುದು ಮತ್ತು ರಾಜಧಾನಿ ಮಾಸ್ಕೋ ಅಕ್ಟೋಬರ್ 28 ರಿಂದ ಭಾಗಶಃ ಲಾಕ್‌ಡೌನ್ ಆಗಲಿದೆ. ಮೆಡಿಕಲ್, ಸೂಪರ್‌ಮಾರ್ಕೆಟ್‌ಗಳಂತಹ ಅಗತ್ಯ ಅಂಗಡಿಗಳನ್ನು ತೆರೆದಿರಲು ಮಾತ್ರ ಅನುಮತಿ ನೀಡಲಾಗಿದೆ.
ನಿಧಾನಗತಿಯಲ್ಲಿ ಲಸಿಕೆ ಹಾಕುತ್ತಿರುವುದೇ ಕೊರೊನಾ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವೆಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇನ್ನೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಸಂಬಳ ಸಹಿತ ಎರಡು ದಿನ ರಜೆ ನೀಡಬೇಕು ಎಂದು ಆದೇಶಿಸಿದ್ದಾರೆ.