ರಾಜಹಂಸಗಡದಲ್ಲಿ ಜೈ ಕರ್ನಾಟಕ, ಜೈ ಬೆಳಗಾವ ಎಂದ ಮಹಾರಾಷ್ಟ್ರ ಶಾಸಕ ಧೀರಜ ವಿರುದ್ದ ಕಿಡಿ : ನಿಮಗೆ ಚಳುವಳಿ ಮುಖ್ಯವೋ? ಪಕ್ಷ ಮುಖ್ಯವೋ ಎಂದ ಎಮ್ ಇಎಸ್
ಬೆಳಗಾವಿ : ಬೆಳಗಾವಿಯ ರಾಜಹಂಸಗಡದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಮಹಾರಾಷ್ಟ್ರದ ಲಾತೂರು ಗ್ರಾಮೀಣ ಕ್ಷೇತ್ರದ ಶಾಸಕ ಧೀರಜ ದೇಶಮುಖ್ ಅವರು ಜೈ ಕರ್ನಾಟಕ, ಜೈ ಬೆಳಗಾಂವ ಎಂದು ಘೋಷಣೆ ಕೂಗಿರುವ ಘಟನೆಯು ನಾಡದ್ರೋಹಿ ಎಮ್‍ಇಎಸ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೌದು ಓದುಗರೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ರವಿವಾರ ಶಾಸಕಿ ಹೆಬ್ಬಾಳಕರ್ ಅವರು ಆಯೋಜಿಸಲಾಗಿದ್ದ ಶಿವಾಜಿ ಮಹಾರಾಜರ ಮೂರ್ತಿ ಎರಡನೇ ಬಾರಿ ಪ್ರತಿಷ್ಠಾಪನೆ, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಧೀರಜ ದೇಶಮುಖ್ ಅವರು ತಮ್ಮ ಭಾಷಣದ ಕೊನೆಯಲ್ಲಿ ಜೈ ಹಿಂದ್, ಜೈ ಮಹಾರಾಷ್ಟ್ರ ಎಂದು ನಾಡದ್ರೋಹಿ ಹೇಳಿಕೆಯಿಂದ ತಮ್ಮ ಮಾತು ಮುಗಿಸುವುದರಲ್ಲಿದ್ದರು.
ಆದರೆ ಮತ್ತೆ ಸಾವರಿಸಿ, ಮುಂದುವರೆದು ಜೈ ಕರ್ನಾಟಕ, ಜೈ ಬೆಳಗಾಂವ ಎನ್ನುವ ಮೂಲಕ ಕರ್ನಾಟಕದ ನೆಲಕ್ಕೆ ಗೌರವ ನೀಡಿದ್ದಾರೆ. ಆದರೆ ಅವರ ಜೈ ಕರ್ನಾಟಕ, ಜೈ ಬೆಳಗಾಂವ ಎಂಬ ಘೋಷಣೆ ಈಗ ನಾಡದ್ರೋಹಿ ಎಮ್‍ಇಎಸ್ ಕೆಂಗಣ್ಣಿಗೆ ಗುರಿಯಾಗಿದ್ದು, ಧೀರಜ ದೇಶಮುಖ್ ಅವರು ವಿರುದ್ದ ಎಮ್‍ಇಎಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂಇಎಸ್‍ನ ಯುವ ಮುಖಂಡ ಶುಭಂ ಶೆಳಕೆ ಈ ಕುರಿತು ಪ್ರತಿಕ್ರಿಯೆ ನೀಡಿ, ಲಾತೂರ ಶಾಸಕ ಧೀರಜ ದೇಶಮುಖ್ ಅವರು ಮರಾಠಿಗರ ಆಶಾಭಾವನೆಗೆ ತಣ್ಣೀರು ಎರಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀರಜ ದೇಶಮುಖ ಹೇಳಿಕೆಯಿಂದ ನಮ್ಮ ಹೋರಾಟಕ್ಕೆ ಭಂಗ ತಂದಂತಾಗಿದೆ. ನಿಮಗೆ ಚಳುವಳಿ ಮುಖ್ಯವೋ? ಪಕ್ಷ ಮುಖ್ಯವೋ ಎಂಬುದನ್ನು ಮಹಾರಾಷ್ಟ್ರದ ನಾಯಕರು ಚಿಂತನೆ ನಡೆಸಬೇಕು ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಮರಾಠಿಗರ ಮತಗಳನ್ನು ಗಮನದಲ್ಲಿಟ್ಟುಕೊಂಡು ರಾಜಹಂಸಗಡದಲ್ಲಿ ಈ ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಇದೀಗ ಧೀರಜ ದೇಶಮುಖ ಹೇಳಿಕೆಯಿಂದ ಮರಾಠಿಗರು ಆಕ್ರೋಶಕ್ಕೆ ಒಳಗಾಗಿರುವುದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.