ಆಯ್ಪಿಎಸ್ ಅಧಿಕಾರಿ ಪಿ ಹರಿಶೇಖರನ್ ಯಲ್ಲಮ್ಮನಗುಡ್ಡಕ್ಕೆ ಭೇಟಿ
ಉಗರಗೋಳ 16: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಪೊಲೀಸ್ ಇಲಾಖೆಯ ಬೆಂಗಳೂರು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿದೆೇರ್ಶಕರು ಆಯ್ಪಿಎಸ್ ಅಧಿಕಾರಿ ಪಿ ಹರಿಶೇಖರನ್ ಸೋಮವಾರ ಭೇಟಿ ನೀಡಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು.
ಯಲ್ಲಮ್ಮ ದೇವಸ್ಥಾನ ಪರವಾಗಿ ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ ಅವರು ಪಿ ಹರಿಶೇಖರನ್ ಅವರಿಗೆ ಶಾಲು ಹೊದಿಸಿ ಸತ್ಕರಿಸಿದರು.
ಪಿ ಹರಿಶೇಖರನ್ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಭಾರತ ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ಖ್ಯಾತಿ ಗಳಿಸಿದ ಧಾರ್ಮಿಕ ಸ್ಥಳ. ಈ ದೇವಸ್ಥಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಚಾರಪಡಿಸುವ ಕೆಲಸವಾಗಬೇಕು. ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಮಾಹಿತಿ ತಿಳಿಸಲು ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್, ಹಿಂದಿ, ಮರಾಠಿ, ತೆಲಗು ಭಾಷೆಗಳಲ್ಲೂ ಇಲ್ಲಿ ನಾಮಫಲಕ ಅಳವಡಿಸಬೇಕು ಎಂದರು.
ದೇವಸ್ಥಾನಗಳು ಮುಕ್ತ ವಿಶ್ವವಿದ್ಯಾಲಯಗಳಿದ್ದಂತೆ. ಈ ಹಿಂದೆ ದೇವಸ್ಥಾನಗಳು ಒಂದೊಂದು ಜಾತಿಗೆ ಸೀಮಿತವಾಗಿದ್ದವು. ಆದರೆ, ಇಂದು ದೇವಸ್ಥಾನ ಜಾತಿ-ಬೇಧವಿಲ್ಲದೆ ಸರ್ವಧರ್ಮವನ್ನು ಸಾರುವಂತಹ ಪುಣ್ಯ ಸ್ಥಳಗಳಾಗಿವೆ. ಭಕ್ತರು ಭಯ, ಭಕ್ತಿಯಿಂದ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎಂದರು.
ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ, ಅರ್ಜುನ್ ಜಿ ಗುಡ್ಡದ್, ಗೋವಿಂದರಾವ್ ಕುಲಕರ್ಣಿ, ಎಂ.ಪಿ.ತೇರದಾಳ, ಅರ್ಚಕ ವಿಶ್ವನಾಥಗೌಡ್ರ, ಪಂಡಿತ ಪಿ ರಾಜಶೇಖರಯ್ಯ ಮತ್ತು ದೇವಸ್ಥಾನ ಸಿಬ್ಬಂದಿ ಇದ್ದರು.