ಬೆಕಾ ರಕ್ಷಣಾ ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ
ನವದೆಹಲಿ, ಅ 27 :ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗಿನ ಸೇನಾಘರ್ಷಣೆಯ ನಡುವೆ, ಭಾರತ ಮತ್ತು ಅಮೆರಿಕ ಮಂಗಳವಾರ ಪ್ರಮುಖ ರಕ್ಷಣಾ ಒಪ್ಪಂದವಾದ ವಿನಿಮಯ ಮತ್ತು ಸಹಕಾರ ಒಪ್ಪಂದ (ಬಿಇಸಿಎ)ಗೆ ಸಹಿ ಹಾಕಿದವು. ಉಭಯ ರಾಷ್ಟ್ರಗಳ ನಡುವೆ ನಡೆದ 2+2 ಸಚಿವಾಲಯದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹಾಗೂ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಇದು ಕಳೆದ ಎರಡು ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ನಾಲ್ಕನೇ ಬೆಕಾ ರಕ್ಷಣಾ ಒಪ್ಪಂದವಾಗಿದೆ. ಇದು ಭಾರತಕ್ಕೆ ಅಮೆರಿಕದ ಉಪಗ್ರಹಗಳಿಂದ ದತ್ತಾಂಶ ಮತ್ತು ಚಿತ್ರಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಭಾರತೀಯ ನೌಕಾಪಡೆಗೆ ಭಾರತೀಯ ಸಾಗರಗಳಲ್ಲಿ ಚೀನಾ ನೌಕಾಪಡೆಯ ಚಟುವಟಿಕೆಯ ಮೇಲೆ ನಿಗಾ ಇರಿಸಲು ನೆರವಾಗುತ್ತದೆ. ಒಪ್ಪಂದದ ಕುರಿತು ಮಾತನಾಡಿದ ಕಾರ್ಯದರ್ಶಿ ಪೊಂಪಿಯೊ, ಅಮೆರಿಕ ಮತ್ತು ಭಾರತವು ಎಲ್ಲಾ ರೀತಿಯ ಬೆದರಿಕೆಗಳ ವಿರುದ್ಧ ನಮ್ಮ ಸಹಕಾರವನ್ನು ಬಲಪಡಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ, ನಾವು ಸೈಬರ್ ವಿಷಯಗಳ ಸಹಕಾರವನ್ನು ವಿಸ್ತರಿಸಿದ್ದೇವೆ ಎಂದಿದ್ದಾರೆ.