ಹುಕ್ಕೇರಿಯಲ್ಲಿ ಶಾಂತಿಯುತ ರಂಗದೋಕುಳಿ
ಹುಕ್ಕೇರಿ 30: ಪ್ರತಿ ವರ್ಷದಂತೆ ಈ ವರ್ಷವೂ ನಗರದ ವಿವಿಧ ಭಾಗಗಳಲ್ಲಿ ಹಾಗೂ ತಾಲೂಕಿನಾದ್ಯಂತ ರಂಗ ಪಂಚಮಿಯನ್ನು ಸರಳವಾಗಿ ಶಾಂತಿಯುತವಾಗಿ ಆಚರಿಸಲಾಯಿತು. ಕರೋನಾದ ಎರಡನೇ ಅಲೆಯನ್ನು ಲೆಕ್ಕಿಸದೆ ಜನ ಬಣ್ಣದಲ್ಲಿ ಮಿಂದು ಒಬ್ಬರ ಮೇಲೆ ಒಬ್ಬರು ಬಣ್ಣ ಎರಚಿ ಸಂಭ್ರಮಿಸಿದರು.
ನಗರದ ವಿವಿಧ ಗಲ್ಲಿಗಳಲ್ಲಿ, ನೂತನ ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕ-ಯುವತಿಯರು ರಂಗದೋಕುಳಿ ಆಡಿದ ನಂತರ ತಮ್ಮ ಸಂಭಂದಿಕರು, ಗೆಳತಿಯರೊಂದಿಗೆ ಮೊಬಾಯಿಲ್ಗಳಲ್ಲಿ ಶೆಲ್ಫಿ ಕ್ಲಿಕ್ ಮಾಡಿಕೊಳ್ಳುವ ದೈಶ್ಯ ವಿಶೇಷವಾಗಿತ್ತು. ಕಾಮ ದಹನ ಮಾಡಿದ ಸ್ಥಳದಲ್ಲಿ ಮಹಿಳೆಯರು ನೈವದ್ಯ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಪ್ರಾರ್ಥಿಸಿಕೊಂಡರು.
ಕೋಟೆ ಭಾಗ, ನಾಯಿಕ ಗಲ್ಲಿ, ಮುತಾಲಿಕ ಗಲ್ಲಿ ಝೆಂಡಾ ಕಟ್ಟೆ, ಬಜಾರ ರಸ್ತೆ, ಗಣೇಶ ನಗರ, ಜಯ ನಗರ, ಆದರ್ಶ ನಗರ, ಹಳ್ಳದಕೇರಿಯ ತುರಮಂದಿ, ಬಸವ ಸರ್ಕಲ್ ಸೇರಿದಂತೆ ಅಲ್ಲಿಯ ಯುವತಿ ಹಾಗೂ ಮಹಿಳೆಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ರಂಗದೋಕುಳಿಯಾಡಿ ಸಂಭ್ರಮಿಸಿದರು.
ಹಿಂದಿನ ದಿನ ರಾತ್ರಿ ಯುವಕರು ಸಂಗ್ರಹಿಸಿದ ಕಟ್ಟಿಗೆ, ಕುಳ್ಳನ್ನು ಒಟ್ಟಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಕಾಮದಹನ ಮಾಡಿದರು. ಯಾವದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು. ಒಟ್ಟಾರೆ ರಂಗಪಂಚಮಿ ಶಾಂತಿಯುತವಾಗಿ ಉತ್ಸಾಹದ ವಾತಾವರಣದಲ್ಲಿ ಜರುಗಿತು.