ಗಣೇಶೋತ್ಸವದಿಂದ ಹಿಂದೂ ಸಂಘಟನೆಗಳ ಶಕ್ತಿ ಹೆಚ್ಚುತ್ತಿದೆ: ಬಸನಗೌಡ ಯತ್ನಾಳ್
ಲಕ್ಷ್ಮೇಶ್ವರ, ಅ. 9: ದೇಶದ್ರೋಹಿಗಳು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಿದ್ದರೂ ಅವರ ಪ್ರಯತ್ನ ಫಲಿಸುವುದಿಲ್ಲ. ಗಣೇಶೋತ್ಸವದ ಮೂಲಕ ಹಿಂದೂ ಸಂಘಟನೆಗಳ ಶಕ್ತಿ ಹೆಚ್ಚುತ್ತಿದೆ ಎಂದು ಹಿಂದೂ ಫೈಬ್ರ್ರ್ಯಂಡ್ ಎಂದೇ ಕರೆಯಲ್ಪಡುವ ವಿಜಯಪುರದ ಮಾಜಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತಕ್ಕೆ ಬಲ ತುಂಬಲು ಹಾಗೂ 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಹಿಂದೂಗಳು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಪಟ್ಟಣದಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ಹಿಂದೂ ಮಹಾಸಭಾ ಗಣಪತಿ ಉತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಯುವಕರನ್ನು ನೋಡಿದಾಗ ಹಿಂದೂ ಸಮಾಜದ ಶಕ್ತಿ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ. ಹಿಂದೂ ಯುವಕರು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ಸಂದರ್ಭಗಳಲ್ಲಿಯೂ ಒಗ್ಗಟ್ಟಿನಿಂದ ಇರಬೇಕು ಎಂದರು.
ಗಣಪತಿ ವಿಸರ್ಜನೆಯನ್ನು ಶಾಂತಿಯುತವಾಗಿ ನಡೆಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪೊಲೀಸ್ ಸಿಬ್ಬಂದಿ ಅಗತ್ಯ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರ ಲಮಾಣಿ ಮಾತನಾಡಿದರು. ಹಿಂದೂ ಮಹಾಸಭಾ ಗಣಪತಿ ಮಂಡಳಿಯ ವತಿಯಿಂದ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಸನ್ಮಾನಿಸಲಾಯಿತು. ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನಾ ಮಹಾಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.