ಅಂತರರಾಷ್ಟ್ರೀಯ

ಹೆದ್ದಾರಿಯೇ ಮದುವೆ ಸ್ಥಳ, ಸಿಂಪಲ್ ಮ್ಯಾರೇಜ್ ನಲ್ಲಿ ವಧುವಿನ ಡ್ರೆಸ್ ಕೇವಲ$ 47!

ಹೆದ್ದಾರಿಯೇ ಮದುವೆ ಸ್ಥಳ, ಸಿಂಪಲ್ ಮ್ಯಾರೇಜ್ ನಲ್ಲಿ ವಧುವಿನ ಡ್ರೆಸ್ ಕೇವಲ$ 47!

ಲಾಸ್ ಏಂಜಲೀಸ್ (ಕ್ಯಾಲಿಫೋರ್ನಿಯಾ): ಏಪ್ರಿಲ್ 26: ಮದುವೆಗೆ ಹೆಚ್ಚು ಹಣ ಖರ್ಚು ಮಾಡುವುದು ಹೊಸ ಪರಿಕಲ್ಪನೆಯಲ್ಲ. ತಮ್ಮ ಜೀವನದಲ್ಲಿ ಸಂತೋಷದ ಸಂದರ್ಭವನ್ನು ಆಚರಿಸಲು ಬಯಸುವ ಜನ ಆ ಸಂದರ್ಭವು ಶ್ರೀಮಂತವಾಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ಮದುವೆ ಎಂದರೆ ಸಾಕು ಅಗತ್ಯವಿರಲಿ, ಇಲ್ಲದೇ ಇರಲಿ ಅದಕ್ಕೆಂದೇ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ. ಮದುವೆಯ ಸಿದ್ಧತೆಗಳು ಮತ್ತು ಡ್ರೆಸ್‌ಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುವವರಿದ್ದಾರೆ. ಆದರೆ ಒಂದು ದಿನದ ಕಾರ್ಯಕ್ಕೆ ಹುಚ್ಚುಚ್ಚಾಗಿ ದೊಡ್ಡ ಮೊತ್ತ ಖರ್ಚು ಮಾಡುವುದನ್ನು ದ್ವೇಷಿಸುವ ಕೆಲವರೂ ಇದ್ದಾರೆ. ಹೌದು.  ಕ್ಯಾಲಿಫೋರ್ನಿಯಾ ದಂಪತಿಗಳು ತಮ್ಮ ಮದುವೆಯ ವೆಚ್ಚವನ್ನು $ 500 ಕ್ಕಿಂತ ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಲಾಸ್ ಏಂಜಲೀಸ್‌ನ ಕಿಯಾರಾ ಮತ್ತು ಜೋಯಲ್ ಬ್ರೋಕನ್‌ಬ್ರೋ ತಮ್ಮ ವಿವಾಹವನ್ನು ಯೋಜಿಸುವಾಗ ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಲು ನಿರ್ಧರಿಸಿದ್ದರು. ಅದರಂತೆ  ದಂಪತಿಗಳು ತಮ್ಮ ಮದುವೆಗೆ $ 500 ಖರ್ಚು ಮಾಡಿದ್ದು, ಮದುವೆ ಹೆಣ್ಣಿನ ಡ್ರೆಸ್ ಬೆಲೆ ಕೇವಲ $ 47 ಎಂಬುದು ಅಚ್ಚರಿ.

ಮದುವೆಗಾಗಿ ವಧು ತನ್ನ ಉಡುಪನ್ನು ಆಯ್ಕೆಮಾಡುವಾಗ ಯಾವಾಗಲೂ ಹೆಚ್ಚು ವೆಚ್ಚ ಮಾಡಲು ಮುಂದಾಗುತ್ತಾಳೆ.ಆದರೆ ಕಿಯಾರಾ ಚಿಲ್ಲರೆ ಅಂಗಡಿಯಲ್ಲಿ  $47 ಮದುವೆಯ ಗೌನ್ ಖರೀದಿಸಿದಳು.

“ನಾನು ಬಟ್ಟೆಗಾಗಿ ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸಲಿಲ್ಲ ಏಕೆಂದರೆ ನಾನು ಕೆಲವು ಗಂಟೆಗಳ ಕಾಲ ಮಾತ್ರ ಇದನ್ನು ಒಂದೇ ಬಾರಿ ಧರಿಸುತ್ತೇನೆ” ಎಂದು ಕಿಯಾರಾ ತಿಳಿಸಿದ್ದಾರೆ.

ಏಂಜಲೀಸ್ ಕ್ರೆಸ್ಟ್ ಹೆದ್ದಾರಿಯ ಮುಕ್ತ ಪ್ರದೇಶವನ್ನು ಮದುವೆಗೆ ಬಳಸಿಕೊಳ್ಳುವ ಮೂಲಕ ದಂಪತಿಗಳು ವೆಚ್ಚವನ್ನು ಕಡಿತಗೊಳಿಸಿದ್ದಾರೆ. ಅವರು ತಮ್ಮ ಮದುವೆಗೆ ಸುಮಾರು 30 ರಿಂದ 40 ಕುಟುಂಬ ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಿದ್ದರು. ಈ ಸಿಂಪಲ್ ಮ್ಯಾರೇಜ್ ವಿಡಿಯೋ ಸಾಕಷ್ಟು ವೀಕ್ಷಣೆ ಕಂಡಿದ್ದು, ಮೆಚ್ಚುಗೆ ಗಳಿಸಿದೆ.

ಸುದ್ದಿ ಓದಿ