ಭಾರೀ ಘರ್ಷಣೆ ಹಿನ್ನೆಲೆ ಶ್ರೀಲಂಕಾ ರಾಜಧಾನಿಯಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ
ಕೊಲಂಬೊ: ಮೇ 09 : ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಪೊಲೀಸರು ಅನಿರ್ದಿಷ್ಟಾವಧಿವರೆಗೆ ಕಫ್ಯೂ ವಿಧಿಸಿದ್ದಾರೆ.
ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸ್ತಿದ್ದವರೊಂದಿಗೆ ಸರ್ಕಾರದ ಬೆಂಬಲಿಗರು ಘರ್ಷಣೆ ನಡೆಸಿದ ನಂತರ ಸೋಮವಾರ ಶ್ರೀಲಂಕಾದ ರಾಜಧಾನಿಯಲ್ಲಿ ಪೊಲೀಸರು ಅನಿರ್ದಿಷ್ಟ ಕರ್ಫ್ಯೂ ವಿಧಿಸಿದ್ದಾರೆ.
ಘರ್ಷಣೆಯಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೊಣ್ಣೆ ಸೇರಿದಂತೆ ವಿವಿಧ ವಸ್ತುಗಳಿಂದ ರಾಜಪಕ್ಸೆ ಬೆಂಬಲಿಗರು ಏಪ್ರಿಲ್ 9 ರಂದು ಅಧ್ಯಕ್ಷರ ಕಚೇರಿಯ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ್ದಾರೆ ಎಂದು ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಸ್ಥಾಪಿಸಿದ್ದ ಟೆಂಟ್‌ಗಳು ಮತ್ತು ಇತರ ರಚನೆಗಳನ್ನು ಒಡೆದುಹಾಕಲು ಪೊಲೀಸ್ ಸರ್ಪಗಾವಲನ್ನು ದಾಟಿ ಬಂದ ಸರ್ಕಾರದ ಬೆಂಬಲಿಗರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿದ್ದಂತೆ ಅನಿರ್ದಿಷ್ಟಾವಧಿವರೆಗೆ ಕರ್ಫ್ಯೂ ವಿಧಿಸಲಾಗಿದೆ.