ಇಂಗ್ಲೆಂಡ್ ತಂಡಕ್ಕೆ ಕಿರುಕುಳ - ಪ್ರಾಂಕ್ ಸ್ಟಾರ್ ಜಾರ್ವೊ ಬಂಧನ
ಲಂಡನ್, ಸೆ 5: ಭದ್ರತಾ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿ, ಟೀಮ್ ಇಂಡಿಯಾ ಜರ್ಸಿ ಧರಿಸಿ.. ಪಂದ್ಯದ ನಡುವೆ ಮೈದಾನದೊಳಗೆ ನುಗ್ಗಿ ಇಂಗ್ಲೆಂಡ್ ಆಟಗಾರರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಾಂಕ್ ಯೂ ಟ್ಯೂಬರ್ ಜಾರ್ವಿಸ್ (ಅ) ಜಾರ್ವೋ (69) ಎಂಬ ವ್ಯಕ್ತಿಯನ್ನು ಲಂಡನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಆತ ಪದೇ ಪದೇ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೈದಾನ ಪ್ರವೇಶಿಸಿ ನಾನಾ ರೀತಿಯ ಕುಚೇಷ್ಟೇ ಮಾಡುತ್ತಿದ್ದ ಹಿನ್ನಲೆಯಲ್ಲಿ ಮೊದಲು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಆತ ಸರಿಹೋಗದ ಹಿನ್ನಲೆಯಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಲಂಡನ್ ದಕ್ಷಿಣ ವಿಭಾಗದ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
'ಜಾರ್ವೋ 69' ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಈ ಟೀಮ್ ಇಂಡಿಯಾ ಅಭಿಮಾನಿ ಇದುವರೆಗೆ ಮೂರು ಬಾರಿ ಮೈದಾನ ಪ್ರವೇಶಿಸಿದ್ದಾರೆ (ಲಾರ್ಡ್ಸ್ ಟೆಸ್ಟ್, ಲೀಡ್ಸ್ ಟೆಸ್ಟ್, ಓವಲ್ ಟೆಸ್ಟ್). ಹೊಸದಾಗಿ ಓವಲ್ ಟೆಸ್ಟ್‌ನ ಎರಡನೇ ದಿನ, ಉಮೇಶ್ ಯಾದವ್ ಬೌಲಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೈದಾನವನ್ನು ಜಾರ್ವೊ ಪ್ರವೇಶಿಸಿದರು. ತಾನು ಟೀಮ್ ಇಂಡಿಯಾ ಬೌಲರ್ ಎಂದು ರಾದ್ದಾಂತ ಮಾಡಿದರು. ಈ ಕ್ರಮದಲ್ಲಿ ನಾನ್-ಸ್ಟ್ರೈಕರ್ ಎಂಡ್ ನಲ್ಲಿದ್ದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಬೈರ್‌ಸ್ಟೊಗೆ ಚೆಂಡನ್ನು ಎಸೆಯವ ರೀತಿ ಆಕ್ಷನ್ ಮಾಡಿದ್ದರು.
ಈ ಘಟನೆಯಿಂದ ಬೈರ್‌ಸ್ಟೊ ಸ್ವಲ್ಪ ಅಸಮಧಾನಗೊಂಡಿದ್ದರು. ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಒಲಿ ಪೋಪ್ ಕೂಡ ತಮ್ಮ ಏಕಾಗ್ರತೆಗೆ ಧಕ್ಕೆ ಯಾಗುತ್ತಿದೆ ಎಂದು ಅಂಪೈರ್ ಗೆ ದೂರು ನೀಡಿದರು. ನಂತರ ಸೆಕ್ಯೂರಿಟಿ ಆಗಮಿಸಿ ಜಾರ್ವೊ ಅವರನ್ನು ಮೈದಾನದಿಂದ ಕರೆದೊಯ್ದಾಗ ಪಂದ್ಯ ಪುನರಾರಂಭವಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಲೀಡ್ಸ್ ಟೆಸ್ಟ್ ನಂತರ, ಜಾರ್ವೋ ವಿರುದ್ದ ಕ್ರೀಡಾಂಗಣ ನಿರ್ವಾಹಕರು ಆಜೀವ ನಿಷೇಧ ಹೇರಿದ್ದರು. ಆದರೂ.. ಜಾರ್ವೊ ಮತ್ತೊಮ್ಮೆ ಅದೇ ರೀತಿ ವರ್ತಿಸಿದ ಕಾರಣ ಇಸಿಬಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ, ಜಾರ್ವೊ ಬಂಧನಕ್ಕೆ ಶಿಫಾರಸು ಮಾಡಿದ್ದರು.