ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿಯಾಗಿ ಹಮ್ಜಾ ಪ್ರಮಾಣ ವಚನ
ಇಸ್ಲಾಮಾಬಾದ್: ಏಪ್ರಿಲ್ 30: ಲಾಹೋರ್ ಹೈಕೋರ್ಟ್‌ನ ಆದೇಶಕ್ಕೆ ಬದ್ಧವಾಗಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ಪುತ್ರ ಹಮ್ಜಾ ಶಹಬಾಜ್ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ರಾಜಾ ಪರ್ವೇಜ್ ಅಶ್ರಫ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಶಹಬಾಜ್ ಷರೀಫ್ ಪಂಜಾಬ್ ಪ್ರಾಂತ್ಯದ 21ನೇ ಮುಖ್ಯಮಂತ್ರಿಯಾಗಿ ಪಟ್ಟವೇರಿದರು.
ಏಪ್ರಿಲ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಹಮ್ಜಾ ಆಯ್ಕೆಯಾದರು. ಆದರೆ ಗವರ್ನರ್ ಒಮರ್ ಸರ್ಫರಾಜ್ ಚೀಮಾ ಅವರು ಏಪ್ರಿಲ್ 17 ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭವನ್ನು ಮುಂದೂಡಿದ್ದರು.
ಸ್ಥಳೀಯ ಸುದ್ದಿ ವಾಹಿನಿ ಜಿಯೋ ನ್ಯೂಸ್ ಪ್ರಕಾರ, ಹಮ್ಜಾ ಅವರು ಪ್ರಮಾಣ ವಚನ ಸಮಾರಂಭವನ್ನು ನಡೆಸುವಂತೆ ಶುಕ್ರವಾರ ಮೂರನೇ ಬಾರಿಗೆ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಪಂಜಾಬ್ ಅಸೆಂಬ್ಲಿಯಲ್ಲಿ 197 ಮತಗಳ ಸ್ಪಷ್ಟ ಬಹುಮತವಿದ್ದರೂ ಅವರ ಪ್ರಮಾಣವಚನ ಸಮಾರಂಭವನ್ನು ಹಲವಾರು ಬಾರಿ ಮುಂದೂಡಲಾಯಿತು ಎಂದು ಆರೋಪಿಸಿದ್ದರು.
ಪ್ರಮಾಣವಚನ ಸಮಾರಂಭಕ್ಕೆ ಸ್ವಲ್ಪ ಮೊದಲು, ಪಂಜಾಬ್ ಗವರ್ನರ್ ಉಮರ್ ಸರ್ಫರಾಜ್ ಚೀಮಾ ನಾಟಕೀಯ ಶೈಲಿಯಲ್ಲಿ ಉಸ್ಮಾನ್ ಬುಜ್ದಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದರು. ಇದು ಸಾಂವಿಧಾನಿಕ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಎಂದು ಅಡ್ಡಗಾಲು ಹಾಕಿದ್ದರು.