ಗ್ರಾ. ಪಂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ: ಕರಮುಡಿ
ಮುಂಡರಗಿ 07: ಗದಗ ಜಿಲ್ಲಾ ಪಂಚಾಯತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಲ್ಲದೇ ಇರುವುದರಿಂದ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಬರ ನಿರ್ವಹಣೆ, ನರೇಗಾ ಯೋಜನೆಯ ಅನುಷ್ಠಾನ ಮುಂತಾದ ಕೆಲಸ ಕಾರ್ಯಗಳು ವೇಳೆಗೆ ಸರಿಯಾಗಿ ನಡೆಯದೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಆದ್ದರಿಂದ ಜಿಲ್ಲಾ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನಿಯೋಜನೆಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಧಿಕಾರಿಗಳಿಗೆ ಡೆಸೆಂಬರ್ 15 ರಂದು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ತಾಲೂಕಾ ಗ್ರಾ.ಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಯಲ್ಲಪ್ಪಗೌಡ ಕರಮುಡಿ ಹೇಳಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ತಿಂಗಳಿಂದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಜಿಲ್ಲಾಧಿಕಾರಿಗಳೇ ಇದನ್ನೂ ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕೆಲಸದ ಒತ್ತಡದಿಂದ ಜಿ.ಪಂ, ಗ್ರಾ.ಪಂ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ಆಗುತ್ತಿಲ್ಲ. ಬರಗಾಲದ ನಿರ್ವಹಣೆ ಮತ್ತು ನರೇಗಾ ಯೋಜನೆಯ ಕಾಮಗಾರಿಗಳು ಕುಂಟಿತಗೊಳ್ಳುತ್ತಿವೆ.
ಗ್ರಾಮ ಸಭೆಗಳಿಗೆ ತಾಲೂಕಿನ 21 ಇಲಾಖೆಗಳಿಗೆ ಮಾಹಿತಿ ಕಳಿಸಿದರೂ ಕೇವಲ 4 ಇಲಾಖೆಯ ಅಧಿಕಾರಿಗಳು ಸಭೆಗೆ ಬರುತ್ತಾರೆ. ಇದರಿಂದ ಉಳಿದ ಇಲಾಖೆಯ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ ಮತ್ತು ವಾರ್ಷಿಕ ಕ್ರೀಯಾ ಯೋಜನೆಯನ್ನು ತಯಾರಿಸಲು ಇದು ಹಿನ್ನಡೆಯಾಗುತ್ತಿದೆ.ವಯಕ್ತಿಕವಾಗಿ ಶೌಚಾಲಯಗಳನ್ನು ಕಟ್ಟಿಸಿಕೊಂಡಿರುವ ಕುಟುಂಬಗಳಿಗೆ ಕಳೆದ 3 ವರ್ಷದಿಂದ ಸಹಾಯ ಧನ ವಿತರಣೆಯಾಗಿಲ್ಲ.ಜಿ.ಪಂಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಲ್ಲದೇ ಇರುವುದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ. ಆದ್ದರಿಂದ ಜಿಲ್ಲಾ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನಿಯೋಜನೆಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಧಿಕಾರಿಗಳಿಗೆ ಡೆಸೆಂಬರ್ 15 ರಂದು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು. ಗದಗ ಜಿಲ್ಲೆಯ ಎಲ್ಲ ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರು ಮನವಿ ಕೊಡುವ ಸಂದರ್ಭದಲ್ಲಿ ಹಾಜರಿರಬೇಕು ಎಂದು ಅವರು ತಿಳಿಸಿದರು.
ಈ ವೇಳೆ ಮಲ್ಲಿಕಾರ್ಜುನ ಹಣಜಿ, ಅಮರೇಶ ಹಿರೇಮಠ,ಬಾಬಾಸಹೇಬ ಬಹದ್ದೂರದೇಸಾಯಿ, ಹನುಮರಡ್ಡಿ ಮೇಟಿ,ಪ್ರಕಾಶ ಕೊಟಗಿ, ಈರಣ್ಣ ತಳವಾರ,ಭೀಮಪ್ಪ ಲಚ್ಚಣ್ಣವರ ಮುಂತಾದವರಿದ್ದರು.