ಹೆಣ್ಣು ಮಕ್ಕಳಿಗೂ ಬದುಕುವ, ಕಲಿಯುವ ಹಕ್ಕಿದೆ : ರಾಮಚಂದ್ರ ಪಡೆಸೂರ
ಗದಗ 14: ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಭಿಯಾನದ ಕುರಿತು ವಿಷಯಾಧಾರಿತ ಕಿರುನಾಟಕವನ್ನು ಅಕ್ಟೋಬರ್ 14, 2026ರಂದು ಮಧ್ಯಾಹ್ನ 12.30ಕ್ಕೆ ಬೆಟಗೇರಿಯಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ಹೆಣ್ಣುಮಕ್ಕಳ ರಕ್ಷಣೆ, ಶಿಕ್ಷಣ ಹಾಗೂ ಸಬಲೀಕರಣದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿತ್ತು. ಕಿರುನಾಟಕದ ಮೂಲಕ ಹೆಣ್ಣುಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು, ಬಾಲ್ಯವಿವಾಹವನ್ನು ತಡೆಗಟ್ಟುವುದು, ಲಿಂಗ ತಾರತಮ್ಯವನ್ನು ನಿವಾರಿಸುವುದು ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮಹತ್ವವನ್ನು ಸಾರಲಾಯಿತು. ಓಖಖ ಸ್ವಯಂಸೇವಕರು ತಮ್ಮ ಅಭಿನಯದ ಮೂಲಕ ಹೆಣ್ಣುಮಕ್ಕಳ ಹಕ್ಕುಗಳು, ಶಿಕ್ಷಣದ ಅಗತ್ಯತೆ ಮತ್ತು ಸಮಾಜದಲ್ಲಿ ಮಹಿಳೆಯರ ಗೌರವಯುತ ಸ್ಥಾನಮಾನದ ಕುರಿತು ಪರಿಣಾಮಕಾರಿಯಾಗಿ ಸಂದೇಶ ನೀಡಿದರು. ಕಾರ್ಯಚಟುವಟಿಕೆಯಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಮಚಂದ್ರ ಪಡೆಸೂರ ಹೆಣ್ಣುಮಕ್ಕಳನ್ನು ರಕ್ಷಿಸುವುದು ಮತ್ತು ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಕುಟುಂಬ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂಬುದಾಗಿ ಅರಿವು ಮೂಡಿಸಿದರು. ಎನ್.ಎಸ್.ಎಸ್ ಘಟಕದ 8ನೇ ತಂಡದ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಸೋಮಶೇಖರ ಕುರಿ ಮಮತಾ ಉಳ್ಳಟ್ಟಿ ರಮೇಶ ಬೋರಿಂಗ್ ಉಪಸ್ಥಿತರಿದ್ದರು.