ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯಿರಿ : ಡಾ. ದಿವಾಣ
ರಬಕವಿ-ಬನಹಟ್ಟಿ 28: ಮಹಾಮಾರಿ ಕೊರೊನಾ ಎರಡನೆಯ ಅಲೆಯ ಪ್ರಭಾವ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆಯಾದರೂ, ಯಾವಾಗಲೂ ಪ್ರತಿಯೊಬ್ಬರೂ ಮುನ್ನಚ್ಚರಿಕೆ ವಹಿಸುವುದು ಅವಶ್ಯವಿದೆ. ಹೆದರದೆ ಕೊವಿಡ್ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಡಾ. ಜೆ.ಎಸ್. ದಿವಾಣ ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ಸೋಮವಾರದಂದು 18ವರ್ಷ ಮೇಲ್ಪಟ್ಟ ಫ್ರಂಟಲೈನ್ ವರ್ಕರ್ಸ್ ತರಕಾರಿ ವ್ಯಾಪಾರಿಗಳು, ಕಿರಾಣಿ, ಹಣ್ಣು ಹಂಪಲ, ಹಾಲು ಮಾರಾಟಗಾರರು ಸೇರಿದಂತೆ ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಚಿಮ್ಮಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 200 ಲಸಿಕೆ, ಸಬ್‌ಸೆಂಟರ್ ಆಸಂಗಿ ಅಸ್ಕಿ, ಮದನಮಟ್ಟಿಯಲ್ಲಿ ಒಟ್ಟು 200 ಲಸಿಕೆ ಹಾಕಲಾಗುತ್ತಿದೆ ಎಂದು ಡಾ. ಅಶೋಕ ಪಡಸಾಲಿ ಹೇಳಿದರು.
ಕೋವಿಡ್ ಲಸಿಕೆ ಪಡೆದುಕೊಳ್ಳುವುದರಿಂದ ಯಾವುದೇ ತೊಂದರೆ, ಅಪಾಯವೂ ಇಲ್ಲ. ವ್ಯಾಕ್ಸಿನ್ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ, ಜನ್ಮದಿನಾಂಕ ಕಡ್ಡಾಯವಾಗಿ ನೀಡಬೇಕು ಎಂದರು.
ಫಾರ್ಮಸಿಸ್ಟ್ ಬಿ.ವಿ.ಗಂಗಾವತಿ, ಹಿರಿಯ ಆರೋಗ್ಯ ಸಹಾಯಕಿ ಟಿ.ವಿ.ಗೋಕಾವಿ, ಹಿರಿಯ ಆರೋಗ್ಯ ಸಹಾಯಕ ಎಂ.ಡಿ.ಮುಚ್ಚಳಗುಡ್ಡ, ಕಿರಿಯ ಆರೋಗ್ಯ ಸಹಾಯಕಿ ಬಿ.ಎಂ.ಮಾದರ ಈ ಸಂದರ್ಭದಲ್ಲಿದ್ದರು.
ನೆಟ್ ಪ್ರಾಬ್ಲಂ : ಲಸಿಕೆ ಹಾಕಿಸಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಜನರ ಆಧಾರ ನಂಬರ್, ಮೊಬೈಲ್ ನಂಬರ್, ಹುಟ್ಟಿದ ವರ್ಷ, ವಯಸ್ಸು ಆನಲೈನ್ ಮಾಹಿತಿ ತುಂಬಲು ನೆಟ್ ಪ್ರಾಬ್ಲಂ ಇರುವುದು ಕಂಡುಬಂದಿತು. ಸಂಬಂಧಿಸಿದವರಿಗೆ ಆಸ್ಪತ್ರೆ ಸಿಬ್ಬಂದಿ ಫೋನ್ ಮಾಡಿ ನೆಟ್ ತೊಂದರೆ ಸರಿಪಡಿಸಲು ವಿನಂತಿಸುತ್ತಿದ್ದರು.