ಕಾಬೂಲ್‌ನಿಂದ ಜನರ ಸ್ಥಳಾಂತರ: ಜರ್ಮನಿ ಸೇನಾ ಕಾರ್ಯಾಚರಣೆ ಇಂದು ಮುಕ್ತಾಯ
ಬರ್ಲಿನ್, ಆಗಸ್ಟ್ 26: ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ಜರ್ಮನಿಯ ಮಿಲಿಟರಿ ಕಾರ್ಯಾಚರಣೆ ಇಂದು ಕೊನೆಗೊಳ್ಳಲಿದೆ ಮೂಲಗಳಿಂದ ತಿಳಿದುಬಂದಿದೆ.
ಕಾಬೂಲ್ ನಿಂದ ಜರ್ಮನಿಯ ಕೊನೆಯ ಸ್ಥಳಾಂತರಿಸುವ ವಿಮಾನ ಇಂದು ಹಾರಾಟ ನಡೆಸಲಿದೆ. "ಅಫ್ಘಾನಿಸ್ತಾನದ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಸ್ಥಿತಿಯ ಕ್ಷೀಣತೆಯೇ ಸ್ಥಳಾಂತರ ಪೂರ್ಣಗೊಳ್ಳಲು ಕಾರಣವಾಗಿದೆ. ಏಕೆಂದರೆ ಜನರು ವಿಮಾನ ನಿಲ್ದಾಣಕ್ಕೆ ಬರಲು ಸಾಧ್ಯವಿಲ್ಲ, ಮತ್ತು ನಿರ್ಗಮಿಸುವುದು ಬಹುತೇಕ ಅಸಾಧ್ಯ ಎನ್ನಲಾಗಿದೆ. ಅಫ್ಘಾನಿಸ್ತಾನದಲ್ಲಿರುವ ಜರ್ಮನ್ ರಾಯಭಾರ ಕಚೇರಿಯು ಬುಧವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿಯ ಭೀತಿ ಹೆಚ್ಚಾಗಿದ್ದು, ದೇಶವನ್ನು ತೊರೆಯಲು ಇಚ್ಛಿಸುವ ಜರ್ಮನ್ ನಾಗರಿಕರಿಗೆ ಎಚ್ಚರಿಕೆ ನೀಡಿತ್ತು. ಆದರೆ ಈ ಮೊದಲು, ಜರ್ಮನಿಯ ರಕ್ಷಣಾ ಮಂತ್ರಿ ಅನೆಗ್ರೆಟ್ ಕ್ರಾಂಪ್-ಕರೆನ್ಬೌರ್ ಅವರು ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ಮಿಲಿಟರಿ ಕಾರ್ಯಾಚರಣೆಯ ಅಂತಿಮ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ,
ಆಗಸ್ಟ್ 15 ರಂದು, ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿತು, ಇದರಿಂದಾಗಿ ಅಫಘಾನ್ ಸರ್ಕಾರ ಪತನಗೊಂಡಿತು. ಇದರ ಪರಿಣಾಮವಾಗಿ, ಹಲವು ದೇಶಗಳು ತಮ್ಮ ನಾಗರಿಕರು ಮತ್ತು ರಾಜತಾಂತ್ರಿಕ ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಅನಿಶ್ಚಿತ ಭದ್ರತೆಯ ಪರಿಸ್ಥಿತಿಯಿಂದ ಸ್ಥಳಾಂತರಿಸಿದ್ದವು ಮತ್ತು 20 ವರ್ಷಗಳ ಹಿಂದಿನ ಯುದ್ಧದ ಸಮಯದಲ್ಲಿ ಅಮೆರಿಕ ಮತ್ತು ಒಕ್ಕೂಟದ ಪಡೆಗಳಿಗೆ ಸಹಾಯ ಮಾಡಿದ ಹಲವಾರು ಅಫ್ಘಾನ್ ನಿರಾಶ್ರಿತರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಭರವಸೆ ನೀಡಿದ್ದವು.