ಗದಗ

ಗಾಂಧಿ, ಶಾಸ್ತ್ರಿಜಿ ಜಯಂತಿ ಆಚರಣೆ: ವಿದ್ಯಾರ್ಥಿಗಳಿಗೆ ಸೋಪು, ಸಾಕ್ಸ್‌ ವಿತರಣೆ

ಗಾಂಧಿ, ಶಾಸ್ತ್ರಿಜಿ ಜಯಂತಿ ಆಚರಣೆ: ವಿದ್ಯಾರ್ಥಿಗಳಿಗೆ ಸೋಪು, ಸಾಕ್ಸ್‌ ವಿತರಣೆ


ಲಕ್ಷ್ಮೇಶ್ವರ, ಅ.2: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.2ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಜಯಂತಿಯನ್ನು ಆಚರಿಸಲಾಯಿತು.  ಈ ಸಂದರ್ಭದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಶಾಲೆಯ ವಿದ್ಯಾರ್ಥಿಗಳಿಗೆ ಸೋಪು ಮತ್ತು ಸಾಕ್ಸ್ಗಳನ್ನು ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ಎಚ್‌. ಉಮಚಗಿ, ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಳ ಜೀವನ, ಸ್ವಾವಲಂಬನೆ, ಸ್ವದೇಶಿ ವಸ್ತುಗಳ ಬಳಕೆ ಹಾಗೂ ಗ್ರಾಮ ಸ್ವರಾಜ್ಯದ ಮೂಲಕ ದೇಶವನ್ನು ಬಲಪಡಿಸುವುದು ಗಾಂಧೀಜಿ ಅವರ ಆಶಯವಾಗಿತ್ತು ಎಂದು ಹೇಳಿದರು.  

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ‘ಜೈ ಜವಾನ್, ಜೈ ಕಿಸಾನ್‌’ ಘೋಷಣೆಯನ್ನು ಸ್ಮರಿಸಿದ ಅವರು, ಸೈನಿಕರ ದೇಶಭಕ್ತಿ ಹಾಗೂ ರೈತರ ಪರಿಶ್ರಮ ದೇಶದ ಮೂಲಸ್ತಂಭಗಳಾಗಿವೆ. ಪ್ರಾಮಾಣಿಕತೆ, ನಿಷ್ಠೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದರು.  

ಗಾಂಧೀಜಿ ಮತ್ತು ಶಾಸ್ತ್ರಿ ಅವರ ತತ್ವ-ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಅವರು ಕರೆ ನೀಡಿದರು.  

ಶಿಕ್ಷಕರಾದ ಎಸ್‌.ಎಸ್‌. ಜಿರಂಕಳಿ, ಕೆ.ಎ.ಆರ್‌. ಮುದಕಣ್ಣವರ, ಪಿ.ಎಸ್‌. ಹವಾಲ್ದಾರ್, ಎಲ್‌.ಎಂ. ದುಂಡಪ್ಪನವರ, ಎನ್‌.ಎಸ್‌. ಬಂಕಾಪುರ, ಪಿ.ಎಂ. ಅಡ್ಡೂರ, ಪಿ.ಎಫ್‌. ಪಾಟೀಲ, ಭಾಗ್ಯಶ್ರೀ ಪೂಜಾರ, ಪೂರ್ಣಿಮಾ, ಆದಿ ಶಾಂಭವೀ, ಅಕ್ಕೂರ, ಮಮತಾಜ್ ಸೊರಟೂರ, ತೇಜಸ್ವಿನಿ, ಅಂಕಲಕೋಟಿ, ಆಯಾ, ಶೋಭಾ, ಶೃತಿ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ