ಹೊನ್ನಳ್ಳಿ ತಾಂಡಾದಲ್ಲಿ ವಿಬಿಜಿ ರಾಮ್‌ಜಿ ಕಾಮಗಾರಿ ಜಿಪಂ ಸಿಇಒ ಪರೀಶೀಲನೆ
ಲೋಕದರ್ಶನ ವರದಿ
ಬಳ್ಳಾರಿ 09: ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಳ್ಳಿ ತಾಂಡಾ ಗ್ರಾಮದಲ್ಲಿ ವಿಬಿಹಿಜಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಶುಕ್ರವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಸ್ಥಳದಲ್ಲೇ ಹಾಜರಿದ್ದ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿದ ಸಿಇಒ ಅವರು, ಕಾಮಗಾರಿಯ ಪ್ರಗತಿ, ಗುಣಮಟ್ಟ ಹಾಗೂ ಯೋಜನೆಯ ಸಮರ್ಕ ಅನುಷ್ಠಾನದ ಕುರಿತು ಕೂಲಂಕಷವಾಗಿ ಪರೀಶೀಲಿಸಿದರು. ಕೂಲಿ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಯಾಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ ಎಂಬ ಮಾಹಿತಿಯನ್ನು ಖುದ್ದು ಕಾರ್ಮಿಕರಿಂದ ಪಡೆದುಕೊಂಡರು.
ಗ್ರಾಮೀಣ ಭಾಗದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಒದಗಿಸಿ ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಗ್ರಾಮೀಣ ಮೂಲಸೌಕರ್ಯಗಳನ್ನು ಬಲಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಯಾವುದೇ ರೀತಿಯ ಲೋಪದೋಷಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಬಾರಿಕರ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.