ಜಾಗತಿಕವಾಗಿ ಬಂಜೆತನಕ್ಕೆ ಮಾನಸಿಕ ವ್ಯಾಕುಲತೆ ಗುಣವಿದೆ : ಡಾ. ದಡ್ಡೇನವರ
ರಬಕವಿ-ಬನಹಟ್ಟಿ 02: ಶೇ.30 ರಷ್ಟು ಜನರಿಗೆ ಜಾಗತಿಕವಾಗಿ ಬಂಜೆತನದ ಮಾನಸಿಕ ವ್ಯಾಕುಲತೆಯಿದೆ. ಬಂಜೆತನ ದೇವರ ಶಾಪವೂ ಅಲ್ಲ, ಯಾವುದೇ ರೋಗವೂ ಅಲ್ಲ ಅದೊಂದು ಶಾರೀರಿಕ ದೋಷವಾಗಿದ್ದು, ಯಾವುದೇ ವಯೋಮಾನದ ಸ್ತ್ರೀ ಪುರುಷರಿಗೆ ಇಂದಿನ ಆಧುನಿಕ ವೈದ್ಯ ವಿಜ್ಞಾನದಲ್ಲಿ ಸಂತಾನ ಪಡೆಯುವ ವಿಫುಲ ಅವಕಾಶವಿದೆ ಎಂದು ಹಿರಿಯ ಸರ್ಜನ್ ಡಾ.ಎಂ.ಎಸ್.ದಡ್ಡೇನವರ ನುಡಿದರು.
ಬುಧವಾರದಂದು ಬಾಗಲಕೋಟೆಯ ದಡ್ಡೇನವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ತೇರದಾಳದ ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪದ್ಮಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಬಂಜೆತನ ನಿವಾರಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಾಗಲಕೋಟೆಯ ನಮ್ಮ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಬಂಜೆತನ ನಿವಾರಣಾ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ರು.3 ಕೋಟಿಗೂ ಹೆಚ್ಚಿನ ಮೌಲ್ಯದ ಯಂತ್ರಗಳನ್ನು ಜಪಾನ್, ಜರ್ಮನ್ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ತರಿಸಿಕೊಂಡು ಅತ್ಯುತ್ತಮ ಐವಿಎಫ್ ತಜ್ಞರು ಮತ್ತು ಅತ್ಯಾಧುನಿಕ ಮೂಲ ಸೌಕರ್ಯಗಳೊಡನೆ ಗುಣಮಟ್ಟದ ಮತ್ತು ಪಾರದರ್ಶಕ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 100 ಹೆಚ್ಚು ಸಂತಾನರಹಿತರು ಚಿಕಿತ್ಸೆ ಪಡೆದು ಸಂತಾನಭಾಗ್ಯ ಹೊಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶವನ್ನು ಡಾ.ನೇಹಾ ಹೊಂದಿದ್ದು, ಎಲ್ಲಾ ವರ್ಗದ ಜನತೆಗೆ ವೈದ್ಯಕೀಯ ಸೇವೆ ನೀಡಲು ಉದ್ದೇಶಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಮಹಾವೀರ ದಾನಿಗೊಂಡ ಸಂತಾನ ರಹಿತರಿಗೆ ಮಾನಸಿಕ ವ್ಯಥೆ ಒಂದೆಡೆಯಾದರೆ ಸಮಾಜ ಅವರನ್ನು ನೋಡುವ ದೃಷ್ಠಿಕೋನ ಭಿನ್ನವಾಗಿರುವ ಕಾರಣ ದಂಪತಿಗಳು ಮಾನಸಿಕ ಖಿನ್ನತೆಗೊಳಗಾಗುತ್ತಾರೆ. ಬಂಜೆತನಕ್ಕೆ ಕೇವಲ ಸ್ತ್ರೀ ಮಾತ್ರ ಕಾರಣವಲ್ಲ ಪುರುಷರಲ್ಲೂ ದೈಹಿಕ ಸಮಸ್ಯೆಗಳಿರಬಹುದು. ದಂಪತಿಗಳಿಬ್ಬರೂ ಪರೀಕ್ಷೆಗೊಳಪಟ್ಟು ಬಂಜೆತನ ನಿವಾರಿಸಕೊಳ್ಳಲು ಸಾಧ್ಯವಿದೆ. ಸಂತಾನ ರಹಿತರಿಗೆ ನಾವು ದೂರದ ಮುಂಬಯಿ, ಬೆಂಗಳೂರು ವೈದ್ಯ ವಿಳಾಸ ನೀಡಿ ಚಿಕಿತ್ಸೆಗೆ ಕಳಿಸುತ್ತಿದ್ದೆವು. ಇದೀಗ ಕೇವಲ 2 ಗಂಟೆ ಪ್ರಯಾಣದ ಬಾಗಲಕೋಟೆಯಲ್ಲಿ ಡಾ.ನೇಹಾ ದಡ್ಡೇನವರ ಚಿಕಿತ್ಸಾ ಕೇಂದ್ರ ಆರಂಭಿಸಿರುವುದು ಉತ್ತರ ಕರ್ನಾಟಕದ ಜನತೆಗೆ ವರವಾಗಿದೆ ಎಂದರು.
ಡಾ.ನೇಹಾ ವಿಜಯ ದಡ್ಡೇನವರ ಮಾತನಾಡಿ ಬಂಜೆತನ ರೋಗವಲ್ಲ ಅದೊಂದು ದೈಹಿಕ ಸಮಸ್ಯೆಯಾಗಿದೆ. ಬಂಜೆತನಕ್ಕೆ ಇಂದಿನ ಆಧುನಿಕ ವೈದ್ಯವಿಜ್ಞಾನದಲ್ಲಿ ಸಾಕಷ್ಟು ಚಿಕಿತ್ಸಾ ಕ್ರಮಗಳಿವೆ. ದೈಹಿಕ ನ್ಯೂನ್ಯತೆ ಮತ್ತು ಚಲನಶೀಲತೆಯಲ್ಲಿನ ಕೊರತೆ ಮುಖ್ಯ ಕಾರಣವಾಗಿರುತ್ತದೆ. ಅಂಡಾಣು ಹಾಗೂ ವೀರ್ಯಾಣುಗಳು ಗುಣಮಟ್ಟದಿಂದ ಕೂಡಿರಬೇಕು. ದಂಪತಿಗಳಲ್ಲಿನ ಯಾವುದೇ ದೈಹಿಕ ಸಮಸ್ಯೆಗಳನ್ನು ಸರಿ ಪಡಿಸಲಾಗುತ್ತಿದೆ. ಅನಿಯಮಿತ ಮುಟ್ಟು, ನಾಳಗಳಲ್ಲಿನ ತಡೆ, ಅಂಡಾಣು ಗುಣಮಟ್ಟದಲ್ಲಿ ಕೊರತೆ, ಗರ್ಭಚೀಲದಲ್ಲಿನ ತೊಂದರೆಗಳು, ಗಂಟು ನಿರ್ಮಾಣ, ವೀರ್ಯಾಣು ಉತ್ಪಾದನೆಯಲ್ಲಿನ ದೋಷ, ಫಲಿತತೆ ಇಲ್ಲದಿರುವುದು, ಒತ್ತಡ, ಖಿನ್ನತೆ ಹಾಗೂ ಹಾರ್ಮೋನ್ಗಳ ವ್ಯತ್ಯಾಸ, ಉಷ್ಣತೆ, ಫಲಿತತೆಯ ಅರಿವು ಇಲ್ಲದಿರುವುದು, ಅನಿಯಂತ್ರಿತ ಮಧುಮೇಹ ಇವೆಲ್ಲ ವೀರ್ಯಾಣು ಗುಣಮಟ್ಟದ ಕುಸಿತಕ್ಕೆ ಕಾರಣಗಳಾಗಿದ್ದು, ಇಂದಿನ ಆಧುನಿಕ ವೈದ್ಯವಿಜ್ಞಾನದಲ್ಲಿ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯ ಲಭ್ಯವಿವೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಡಾ.ಸುಮಂಗಲಾ ದಡ್ಡೇನವರ, ಡಾ.ವಿಜಯ ದಡ್ಡೇನವರ, ಪ್ರಾಚಾರ್ಯ ಡಾ.ಪಿ.ಬಿ.ಅಪರಾಜ ಉಪಸ್ಥಿತರಿದ್ದರು. ಡಾ.ಸುಪ್ರೀಯಾ ಸಂಗಡಿಗರು ಪ್ರಾರ್ಥಿಸಿದರು. ರಾಹುಲ ಕವಟಗೊಪ್ಪ, ಡಾ.ನಿಖಿತಾ ನಿರೂಪಿಸಿದರು. ಡಾ.ಮಹೇಶ ಮಗೆನ್ನವರ ವಂದಿಸಿದರು.
ಸಮಾರಂಭದಲ್ಲಿ ಡಾ.ಸತೀಶ ವಾಸನ, ಡಾ.ಶ್ರೀಕಾಂತ ಪಾಟೀಲ, ಡಾ.ಪಲ್ಲವಿ ಕೊಡಗೆ, ಡಾ.ಸಾತ್ವಿಕ್, ಡಾ.ಪೂಣೀರ್ಮಾ ಜಮಖಂಡಿ, ಸ್ವಾತಿ ಸೋರಗಾಂವಿ, ಐಶ್ವರ್ಯ, ಶ್ರೀಶೈಲ ದಬಾಡಿ, ಶಂಕರ ಜಾಲಿಗಿಡದ, ಚನ್ನಪ್ಪ ಹಾದಿಮನಿ, ಶೇಖರ ಮಾಲಾಪುರ, ಪ್ರಕಾಶ ಕಣಗೊಂಡ ಮುಂತಾದವರಿದ್ದರು. ಶಿಬಿರದಲ್ಲಿ 98 ದಂಪತಿಗಳು ಉಚಿತ ಸಮಾಲೋಚನೆ ಮತ್ತು ಚಿಕಿತ್ಸೆ ಪಡೆದುಕೊಂಡರು.