ಅಂತರರಾಷ್ಟ್ರೀಯ

ಬಲೂಚಿಸ್ತಾನ, ಖೈಬರ್-ಪಖ್ತುಂಖ್ವಾದಲ್ಲಿ ನಾಲ್ವರು ಭಯೋತ್ಪಾದಕರು ಹತ

ಬಲೂಚಿಸ್ತಾನ, ಖೈಬರ್-ಪಖ್ತುಂಖ್ವಾದಲ್ಲಿ ನಾಲ್ವರು ಭಯೋತ್ಪಾದಕರು ಹತ

ಇಸ್ಲಾಮಾಬಾದ್: ಜೂನ್ 08 : ಖೈಬರ್-ಪಖ್ತುಂಖ್ವಾದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಹಸನ್ ಖೇಲ್ ಪ್ರದೇಶದಲ್ಲಿ ಮತ್ತು ಬಲೂಚಿಸ್ತಾನ್ ಪ್ರಾಂತ್ಯದ ನುಷ್ಕಿ ಜಿಲ್ಲೆಯ ಪರೋಡ್ ಪರ್ವತದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕನಿಷ್ಠ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಬುಧವಾರ ಈ ಕುರಿತು ವರದಿ ನೀಡಿದೆ.

ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಪ್ರಕಾರ, ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿಯ ಮೇರೆಗೆ ಖೈಬರ್-ಪಖ್ತುಂಖ್ವಾದಲ್ಲಿ ಸೋಮವಾರ, ಜೂನ್ 6 ರಂದು ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಮತ್ತೊಂದು ಗುಂಡಿನ ಚಕಮಕಿಯಲ್ಲಿ ಸೇನೆ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಮೃತ ಉಗ್ರರನ್ನು ನದೀಮ್ ಮತ್ತು ಶಹಜಾದ್ ಆಲಂ ಎಂದು ಗುರುತಿಸಲಾಗಿದೆ. ಖರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.

ಬಲೂಚಿಸ್ತಾನ್ ಸೇರಿದಂತೆ ಅನೇಕ ಪ್ರಾಂತ್ಯಗಳನ್ನು ಸ್ವತಂತ್ರಗೊಳಿಸುವಂತೆ ಅನೇಕ ಗುಂಪುಗಳು ಬಂದೂಕುಗಳನ್ನು ತಮ್ಮ ಕೈಗೆ ಹಿಡಿದು, ಪಾಕಿಸ್ತಾನದ ಸೇನೆ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ.

ಸುದ್ದಿ ಓದಿ