ಅಂತರರಾಷ್ಟ್ರೀಯ

ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್

ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್

ಬೀಜಿಂಗ್: ಮೇ 21 : ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರೋ ಚೀನಾ ಮೇಲೇಳಲು ಒದ್ದಾಡ್ತಿದೆ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗ್ತಿದ್ದು, ದೇಶವನ್ನು ಕೊರೊನಾ ಮುಕ್ತ ಮಾಡಲು ಹಲವು ಕಠಿಣ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಶಾಂಘೈನಂತಹ ಸ್ಥಿತಿ ಬೀಜಿಂಗ್ ಗೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ನೆಗೆಟಿವ್ ಇರುವವರನ್ನು ಕ್ವಾರಂಟೈನ್ ಗೆ ಕಳಿಸುವಂತಹ ಬಿಗಿ ಕ್ರಮಕ್ಕೆ ಮುಂದಾಗಿದೆ.  ಬೆರಳೆಣಿಕೆಯಷ್ಟು ಸೋಂಕುಗಳ ಕಾರಣದಿಂದಾಗಿ ಕೋವಿಡ್ ನೆಗೆಟಿವ್ ಇರುವ ಸಾವಿರಾರು ಬೀಜಿಂಗ್ ನಿವಾಸಿಗಳನ್ನು ರಾತ್ರಿಯಿಡೀ ಕ್ವಾರಂಟೈನ್ ಹೋಟೆಲ್‌ಗಳಿಗೆ ಬಲವಂತವಾಗಿ ಸ್ಥಳಾಂತರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪತ್ತೆಯಾದ 26 ಹೊಸ ಸೋಂಕುಗಳ ಕಾರಣದಿಂದಾಗಿ ಆಗ್ನೇಯ ಬೀಜಿಂಗ್‌ನ ನಂಕ್ಸಿನ್ಯುವಾನ್ ವಸತಿ ಸಂಕೀರ್ಣದ 13,000 ಕ್ಕೂ ಹೆಚ್ಚು ನಿವಾಸಿಗಳನ್ನು ಶುಕ್ರವಾರ ರಾತ್ರಿಯಿಡೀ ಕ್ವಾರಂಟೈನ್ ಹೋಟೆಲ್‌ಗಳಿಗೆ ಸ್ಥಳಾಂತರಿಸಲಾಯಿತು.

“ಎಲ್ಲಾ ನಾಂಕ್ಸಿನ್ಯುವಾನ್ ನಿವಾಸಿಗಳು ಮೇ 21 ರ ಮಧ್ಯರಾತ್ರಿಯಿಂದ ಏಳು ದಿನಗಳವರೆಗೆ ಕ್ವಾರಂಟೈನ್ ಗೆ ಒಳಗಾಗುತ್ತಾರೆ ಎಂದು ತಜ್ಞರು ನಿರ್ಧರಿಸಿದ್ದಾರೆ” ಎಂದು ಚಾಯಾಂಗ್ ಜಿಲ್ಲೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

“ದಯವಿಟ್ಟು ಸಹಕರಿಸಿ, ಇಲ್ಲದಿದ್ದರೆ ನೀವು ಅನುಗುಣವಾದ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.” ಎಂದಿದ್ದಾರೆ.ನೂರಾರು ನಿವಾಸಿಗಳು ಸಾಮಾನು ಸರಂಜಾಮುಗಳೊಂದಿಗೆ ಕತ್ತಲೆಯಲ್ಲಿ ಕಾಂಪೌಂಡ್‌ನ ಹೊರಗೆ ನಿಲ್ಲಿಸಲಾದ ಕೋಚ್‌ಗಳನ್ನು ಹತ್ತಲು ಸರತಿ ಸಾಲಿನಲ್ಲಿ ನಿಂತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಬೀಜಿಂಗ್ ಕೋವಿಡ್ ವಿರುದ್ಧ ಹೋರಾಡುತ್ತಲೇ ಇದೆ.  ಓಮಿಕ್ರಾನ್ ರೂಪಾಂತರವು ಏಪ್ರಿಲ್ ಅಂತ್ಯದಿಂದ 1,300 ಕ್ಕೂ ಹೆಚ್ಚು ಸೋಂಕಿತರ ಮೇಲೆ ದಾಳಿ ಮಾಡಿದೆ.  ನಗರದಲ್ಲಿ  ಪ್ರಮುಖ ರೆಸ್ಟೋರೆಂಟ್‌ಗಳು, ಶಾಲೆಗಳು ಮತ್ತು ಪ್ರವಾಸಿ ತಾಣಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.

ಶೂನ್ಯ ಕೋವಿಡ್ ಪ್ರಕರಣಗಳನ್ನು ಸಾಧಿಸಲು ಚೀನಾ ಕಟ್ಟುನಿಟ್ಟಾದ ಕಾರ್ಯತಂತ್ರಗಳನ್ನು ಪಾಲಿಸುತ್ತಿದೆ. ಅದರಲ್ಲಿ ಗಡಿಗಳನ್ನು ಮುಚ್ಚುವುದು,  ಸುದೀರ್ಘ ಅವಧಿಯ ಕ್ವಾರಂಟೈನ್, ತ್ವರಿತ ಮತ್ತು  ಸಾಮೂಹಿಕ ಪರೀಕ್ಷೆ , ಉದ್ದೇಶಿತ ಲಾಕ್‌ಡೌನ್‌ ಕ್ರಮಗಳನ್ನು ಒಳಗೊಂಡಿದೆ.

ಸುದ್ದಿ ಓದಿ