ಯುದ್ಧಪೀಡಿತ ಉಕ್ರೇನ್‌ನಲ್ಲಿ ಆಹಾರದ ಬಿಕ್ಕಟ್ಟು: ನೆರವಿಗೆ ಬಂದ ಬ್ರಿಟನ್
ಲಂಡನ್: ಮಾರ್ಚ್ 26: ಕಳೆದೊಂದು ತಿಂಗಳಿನಿಂದ ಬಾಂಬ್ ದಾಳಿಗೆ ತುತ್ತಾಗಿರುವ ಉಕ್ರೇನ್ ನಲ್ಲಿ ಆಹಾರ ಪದಾರ್ಥಗಳು ಸಾಮಾನ್ಯ ಜನರಿಗೆ ಕೈಗೆಟಕುತ್ತಿಲ್ಲ. ಆಹಾರದ ಕೊರತೆ ಎದುರಿಸುತ್ತಿರುವ ಉಕ್ರೇನ್‌ಗೆ ಸದ್ಯ ಮಾನವೀಯ ನೆಲಗಟ್ಟಿನಲ್ಲಿ ನೆರವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವು ನೀಡಿದೆ. ಈಗ ಬ್ರಿಟನ್ ಸಹ ಮುಂದೆ ಬಂದಿದ್ದು, 2 ಮಿಲಿಯನ್ ಪೌಂಡ್ ಗಳ ಮೌಲ್ಯದ ಅಗತ್ಯ ಆಹಾರ ಪದಾರ್ಥಗಳನ್ನು ಪೂರೈಸಲಿದೆ. ಬ್ರಿಟನ್ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದೆ.
ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ತನ್ನ ಹೇಳಿಕೆಯಲ್ಲಿ, “ರಷ್ಯಾದ ಪಡೆಗಳಿಂದ ಸುತ್ತುವರಿದ ಉಕ್ರೇನ್‌ಗೆ ಬ್ರಿಟನ್ ಎರಡು ಮಿಲಿಯನ್ ಪೌಂಡ್‌ಗಳ ಅಗತ್ಯ ಆಹಾರವನ್ನು ಪೂರೈಸುತ್ತದೆ” ಎಂದು ತಿಳಿಸಿದರು. ಉಕ್ರೇನ್‌ನಲ್ಲಿ 12 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಮಾನವೀಯ ನೆರವಿನ ಅಗತ್ಯವಿದೆ. ಉಕ್ರೇನಿಯನ್ ಅಧಿಕಾರಿಗಳು ಮಾಡಿದ ಮನವಿಯ ನಂತರ ಈ ಸಹಾಯವನ್ನು ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಇದರಲ್ಲಿ ಒಣ ಆಹಾರ, ಪೂರ್ವಸಿದ್ಧಪಡಿಸಿದ ಆಹಾರ ಮತ್ತು ಕುಡಿಯುವ ನೀರು ಸೇರಿವೆ. ಪೋಲೆಂಡ್ ಮತ್ತು ಸ್ಲೋವಾಕಿಯಾದ ಗೋದಾಮುಗಳಿಂದ ಸುಮಾರು 25 ಟ್ರಕ್‌ಗಳಲ್ಲಿ ಈ ವಸ್ತುಗಳನ್ನು ಮುಂದಿನ ವಾರದ ವೇಳೆಗೆ ರಸ್ತೆ ಮತ್ತು ರೈಲಿನ ಮೂಲಕ ಉಕ್ರೇನ್‌ಗೆ ತಲುಪಿಸಲಾಗುವುದು ಎಂದು ಸಚಿವಾಲಯ ಹೇಳಿದೆ.
ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಫೆಬ್ರವರಿ 24 ರಂದು ಪ್ರಾರಂಭವಾಗಿದ್ದು, ಎರಡೂ ರಾಷ್ಟ್ರಗಳ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದ್ರೂ ಯುದ್ಧ ನಿಂತಿಲ್ಲ.