ಅಂತರರಾಷ್ಟ್ರೀಯ

“ತಾಲ್” ಜ್ವಾಲಾಮುಖಿ ಸ್ಫೋಟಿಸುವ ಭಯದಲ್ಲಿ ಜನ: ಫಿಲಿಪೈನ್ಸ್ ಎಚ್ಚರಿಕೆ

“ತಾಲ್” ಜ್ವಾಲಾಮುಖಿ ಸ್ಫೋಟಿಸುವ ಭಯದಲ್ಲಿ ಜನ: ಫಿಲಿಪೈನ್ಸ್ ಎಚ್ಚರಿಕೆ

ಮನಿಲಾ: ಮಾರ್ಚ್ 26 : ಫಿಲಿಪೈನ್ಸ್ ನಲ್ಲಿರುವ ತಾಲ್ ಜ್ವಾಲಾಮುಖಿ ಮತ್ತೆ ತನ್ನ ಪ್ರತಾಪ ತೋರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಫಿಲಿಪೈನ್ಸ್ ನ ಜ್ವಾಲಾಮುಖಿ ಮತ್ತು ಭೂಕಂಪ ಕೇಂದ್ರವು ಸೂಚನೆ ಕೊಟ್ಟಿದೆ.

ಫಿಲಿಪೈನ್ಸ್ ನ ತಾಲ್ ಸರೋವರದಲ್ಲಿ ಕಂಡುಬರುವ ತಾಲ್ ಜ್ವಾಲಾಮುಖಿಯಲ್ಲಿ 38 ಬಾರಿ ಸ್ಫೋಟಗಳ ಸಂಭವಿಸಿರುವ ಬಗ್ಗೆ ದಾಖಲೆಗಳಿವೆ. ಭೂಗರ್ಭದಲ್ಲಿ ಆಗುತ್ತಿರುವ ಚಲವಲನಗಳ ಆಧಾರದ ಮೇಲೆ ಈ ಪ್ರದೇಶದ ಸುತ್ತಮುತ್ತಲಿನ ಜನ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಹಾಗೂ ಆ ಪ್ರದೇಶದ ಮೇಲೆ ವಿಮಾನ ಹಾರಾಟವನ್ನು ನಿಲ್ಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

ಫಿಲಿಪೈನ್ಸ್‌ನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲೊಂದಾಗಿರುವ ತಾಲ್ ಭೂಗರ್ಭದಲ್ಲಿ ಹೆಚ್ಚುತ್ತಿರುವ ಚಲನವಲನ, ಜ್ವಾಲಾಮುಖಿಯ ಬಾಯಿಯಿಂದ ಹೊರಬರುತ್ತಿರುವ ಅನಿಲ ಗುಳ್ಳೆಗಳು ಹಾಗೂ ಸ್ಥಳೀಯ ಕಾಲಮಾನ ಬೆಳಗ್ಗೆ 7.22ಕ್ಕೆ ಭೂಕಂಪನದ ಅನುಭವವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಈ ಎಚ್ಚರಿಕೆ ನೀಡಿದೆ. ಜ್ವಾಲಾಮುಖಿ ಮಟ್ಟವು 05 ರಿಂದ 03ಕ್ಕೆ ಏರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಬಟಾಂಗಾಸ್ ಪ್ರಾಂತ್ಯದಲ್ಲಿರುವ ಈ ಜ್ವಾಲಾಮುಖಿಯ ಮುಖ್ಯ ಕುಳಿಯಿಂದ ಶಿಲಾಪಾಕ ಹೊರಸೂಸಲ್ಪಟ್ಟ ನಂತರ, ಇನ್ನೂ ಅನೇಕ ಸ್ಫೋಟಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಜನರು ಈ ಪ್ರದೇಶದಿಂದ ದೂರವಿರಬೇಕು ಮತ್ತು ಈ ಪ್ರದೇಶದ ಮೇಲೆ ವಿಮಾನ ಹಾರಾಟ ಸ್ಥಗಿತಗೊಳಿಸಬೇಕೆಂದು ಕೇಂದ್ರದಿಂದ ಎಚ್ಚರಿಕೆ ನೀಡಲಾಗಿದೆ.

ಫಿಲಿಪೈನ್ಸ್‌ನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಎರಡನೇಯದ್ದಾದ ತಾಲ್ ಜ್ವಾಲಾಮುಖಿಯು ಜನವರಿ 2020 ರಲ್ಲಿ ಸ್ಫೋಟಿಸಿತ್ತು. ಈ ಸಂದರ್ಭದಲ್ಲಿ ಪ್ರಾಂತ್ಯದ ಅನೇಕ ರಸ್ತೆಗಳು, ಮನೆಗಳು ಮತ್ತು ಹೊಲಗಳು ಸಂಪೂರ್ಣವಾಗಿ ನಾಶವಾಗಿದ್ದವು. ಅಲ್ಲದೆ 3 ಲಕ್ಷ 80 ಸಾವಿರ ಜನರನ್ನು ಈ ಪ್ರದೇಶದಿಂದ ಸ್ಥಳಾಂತರ ಮಾಡಲಾಗಿತ್ತು.

ಸುದ್ದಿ ಓದಿ