ಬೆಲೆ ನಿಯಂತ್ರಣ ವೈಪಲ್ಯದಿಂದ ರೈತರು ಸಾಲದ ಸೂಳಿಯಲ್ಲಿ ಸಿಲುಕಿದ್ದಾರೆ: ಸಿಂಧೂರ
ಜಮಖಂಡಿ 16: ಸರಕಾರ ಮತ್ತು ಜಿಲ್ಲಾಧಿಕಾರಿಗಳಿಂದ ಬೆಲೆ ನಿಯಂತ್ರಣ ವೈಪಲ್ಯದಿಂದ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಮತ್ತು ಇತರೇ ಕೃಷಿಕ ರೈತರು ತೀವ್ರವಾಗಿ ಆರ್ಥಿಕ ಸಂಕಷ್ಟು ಎದುರಿಸುವ ಮೂಲಕ ಸಾಲದ ಸೂಳಿಯಲ್ಲಿ ಸಿಲುಕಿದ್ದಾರೆ ಎಂದು ರೈತ ಮುಖಂಡ ಬಿ.ಎಸ್.ಸಿಂಧೂರ ಹೇಳಿದರು.
ನಗರದ ರಮಾನಿವಾಸ ಸಭಾಭವನದಲ್ಲಿ ರೈತ ಸಂಘ ಮತ್ತು ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಮಾಲಿಕರನ್ನು ನಿಯಂತ್ರಿಸುವ ಶಕ್ತಿ ಇಲ್ಲವಾಗಿದ್ದು, ಕೇವಲ ರೈತರನ್ನು ನಿಯಂತ್ರಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ರೈತರು ಬೆಳೆದು ಕಾರಖಾನೆಗೆ ಕಳಿಸಿರುವ ಕಬ್ಬಿನ ಬಿಲ್ ಬಾಕಿ ಉಳಿದುಕೊಂಡಿದ್ದು ರೈತರಿಗೆ ಕೊಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಸಕ್ಕರೆ ಕಾರಖಾನೆಗಳ ಮಾಲಿಕರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಕಠಿಣಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ರಾಜ್ಯದ 37 ಶಾಸಕರ ಸಕ್ಕರೆ ಕಾರಖಾನೆಗಳಿದ್ದು, ಸಕ್ಕರೆ ಕಾರಖಾನೆ ಮಾಲಿಕರು ಸರಕಾರ ಮತ್ತು ಜಿಲ್ಲಾಡಳಿತವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ನಿನ್ನೆ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ರೈತರ ಪರವಾಗಿ ನಡೆಯದೇ ಮತ್ತೊಮ್ಮೆ ಕಾರಖಾನೆ ಮಾಲಿಕರ ಪರವಾಗಿ ನಿರ್ಣಯಗಳಾಗಿವೆ. ರೈತರು ಕಾರಖಾನೆಗೆ ಕಳುಹಿಸಿದ ಕಬ್ಬಿಗೆ 15 ದಿನದಲ್ಲಿ ಹಣ ಮಾಡಬೇಕು ಇಲ್ಲವಾದಲ್ಲಿ ಬಡ್ಡಿ ಸಮೇತ ಜಮಾ ಮಾಡಬೇಕು ಎಚ್ಚರಿಸುವ ಜಿಲ್ಲಾಧಿಕಾರಿಗಳು ಮೊದಲು ರೈತರ ಕಬ್ಬಿನ ಪಾವತಿಗೆ ಅಗತ್ಯ ಕ್ರಮಕೈಗೊಳ್ಳಲಿ ನಮಗೆ ಬಡ್ಡಿ ಅವಶ್ಯಕತೆಯಿಲ್ಲ ಎಂದು ತೀರುಗೇಟು ನೀಡಿದರು.
ರೈತರ ಹಿತ ಕಾಪಾಡುವುದೇ ರೈತ ಸಂಘದ ಕರ್ತವ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ಕಬ್ಬಿನ ಬಿಲ್ ಬಾಕಿ ಉಳಿದಿದ್ದು, ಇದನ್ನು ಖಂಡಿಸಿ ಈಗಾಗಲೆ ರಾಜ್ಯದಲ್ಲಿ ರೈತರು, ರೈತ ಮುಖಂಡರು ಹೋರಾಟ ನಡೆಸುತ್ತಿದ್ದಾರೆ. ಯಾವುದಕ್ಕೂ ಜಗ್ಗದೇ ಕಾರ್ಖಾನೆ ಮಾಲಿಕರು ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ರೈತ ದೇಶದ ಬೆನ್ನಲಬು ಆದರೆ ರೈತನಿಗೆ ತಾನು ಬೆಳೆದ ಬೆಳೆ ತನಗೆ ಬೆನ್ನೆಲಬು. ಕೃಷಿಯೆ ತನ್ನ ಮೂಲ ವೃತ್ತಿಯಾಗಿದ್ದು, ಹೀಗಿರುವಾಗ ನಾವು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ನಿಗದಿ ಆಗದಿದ್ದರೆ ನಮ್ಮ ಪರಿಸ್ಥಿತಿ ಅದೋಗತಿ ಆಗಲಿದೆ ಎಂದರು.
ಸರ್ಕಾರ ಮತ್ತು ಕಬ್ಬಿನ ಕಾರಖಾನೆ ಮಾಲಿಕರ ಮುಚ್ಚಳಕೆಯಲ್ಲಿರುವ ನೀಡಿದ ಪ್ರಕಾರ ಬಿಲ್ ಸಂದಾಯ ಮಾಡಬೇಕು. ಕಾರಖಾನೆ ಮತ್ತು ರೈತರ ಕೊಂಡಿಯಾಗಿ ಜಿಲ್ಲಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದಕ್ಕೂ ರೈತರನ್ನೆ ಬಲಿಪಶು ಮಾಡುವದು ಸರಿಯಲ್ಲ. ರೈತರ ಕಬ್ಬು ಬೆಳೆಯಲು ಸಾಕಷ್ಟು ಖರ್ಚು ವೆಚ್ಚಗಳಿದ್ದು, 1 ಎಕರೆಗೆ ಕಬ್ಬಿನ ಇಳುವರಿಗೆ 70 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಆದರೆ ಕಬ್ಬು ಬೆಳೆದ ನಂತರ ಕಬ್ಬಿನ ಕಾರ್ಖಾನೆಗಳಿಂದ ಒಂದು ಎಕರೆಗೆ ಅಂದಾಜು 30 ಟನ್ಗೆ 2700 ರೂ.ಗಳಂತೆ 74 ಸಾವಿರ ಬಿಲ್ ಸಂದಾಯವಾಗುತ್ತಿದೆ. ಇದರಿಂದ ಮತ್ತಷ್ಟು ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರಸಕ್ತ ವರ್ಷ ಒಂದು ಟನ್ಗೆ ಕನಿಷ್ಠ 3500 ರೂ.ಗಳ ದರ ನಿಗದಿ ಮಾಡುವ ಮೂಲಕ ಕಬ್ಬು ಕಾರ್ಖಾನೆ ತಲುಪಿದ 15 ದಿನಗಳಲ್ಲಿ ರೈತರಿಗೆ ನೇರವಾಗಿ ಬಿಲ್ ಸಂದಾಯ ಆಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನ ಮಲಘಾಣ, ಕಲ್ಲಪ್ಪ ಬಿರಾದಾರ, ಅಪ್ಪಾಸಾಬ ಬಿರಾದಾರ, ಮಲ್ಲು ಮದ್ಗುಮ, ಭೀಮಶಿ ಮದನಮಟ್ಟಿ, ರಮೇಶ ಕಣಬೂರ, ಶಿವಲಿಂಗ ಸಿಂಗಾಡಿ, ಅನ್ನಪೂರ್ಣಾ ನಿಂಗಸಾನಿ, ಶ್ರೀಶೈಲ ಭೂಮಾರ, ರಾಮಣ್ಣ ಬಳ್ಳೊಳ, ರವಿ ಐಗಳಿ, ಮುತ್ತಪ್ಪ ಕುಂಬಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.