ಮೆಕ್ಕೇಜೋಳ ಖರೀದಿ ಕೇಂದ್ರಕ್ಕೆ ರೈತರ ಆಗ್ರಹ
ಸವದತ್ತಿ 14: ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದು, ಸರ್ಕಾರ ಕೊಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.ಈಗಾಗಲೇ ಮೆಕ್ಕೆಜೋಳ ಕಟಾವು ಮಾಡಿ ಅಲ್ಲಲ್ಲಿ ಇರಿಸಿ ಬೆಂಬಲ ಬೆಲೆ ಕೆಂದ್ರ ಯಾವಾಗ ಆರಂಭವಾಗತ್ತೆ ಅನ್ನೊ ನೀರೀಕ್ಷೆಯಲ್ಲಿ ರೈತರು ಕಾದು ಕುಳಿತಿದ್ದಾರೆ. ಮುಂಗಾರಿನಲ್ಲಿ ತಾಲೂಕಿನಾದ್ಯಂತ 13,601 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದ ಸ್ವಲ್ಪ ಪ್ರಮಾಣದ ಮೆಕ್ಕೆಜೋಳ ಹಾನಿಯಾಗಿದ್ದು ಅದರಲ್ಲಿ ಅಳಿದು ಉಳಿದ ಉತ್ತಮ ಗುಣಮಟ್ಟದ ಮೆಕ್ಕೆಜೋಳವನ್ನು ರೈತರು ಮಾರಾಟಕ್ಕಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಕೇವಲ 1200 ರಿಂದ 1500 ರೂ.ವರೆಗೆ ವ್ಯಾಪಾರಸ್ಥರು ಕೇಳುತ್ತಿರುವುದರಿಂದ ರೈತರು ಆರ್ಥಿಕ ಮುಗ್ಗಟ್ಟು ಅನುಭವಿಸುವಂತಾಗಿದೆ. ಆದರೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ 1850 ರಿಂದ 1870 ಇದೆ. ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೂ ಈವರೆಗೆ ಸರ್ಕಾರ ಬೆಂಬಲ ಬೆಲೆ ಕೇಂದ್ರಗಳನ್ನು ಆರಂಭಿಸಿಲ್ಲ. ಇದರಿಂದ ರೈತನಿಗೆ ಆರ್ಥಿಕ ತೊಂದರೆಯ ಭೀತಿ ಕಾಡುತ್ತಿದೆ. ಮೆಕ್ಕೆಜೋಳ ಬಿತ್ತನೆ ಬೀಜದಿಂದ ಹಿಡಿದು, ಗೊಬ್ಬರ, ಎಣ್ಣೆ ಸಿಂಪಡಣೆ, ಎಡೆ, ಕೂಲಿ, ವಕ್ಕಲಿ, ಸೇರಿ ಮೆಕ್ಕೆಜೋಳ ಬೆಳೆಯುವ ಖರ್ಚು ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ಬೆಳೆದ ಬೆಳೆಯ ಖರ್ಚು ಸಹ ರೈತನ ಮೈಮೇಲೆ ಬೀಳುತ್ತದೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದರೆ. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಎನ್ನುವುದು ರೈತರ ಒತ್ತಾಸೆಯಾಗಿದೆ. ಆದ್ದರಿಂದ ಸರ್ಕಾರ ಕೊಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ ರೈತರ ಆರ್ಥಿಕ ಹೊರೆಯನ್ನು ತಗ್ಗಿಸಬೇಕಿದೆ.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಾರಡ್ಡಿ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿ ಮಟ್ಟದಲ್ಲಿ ಚರ್ಚೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಜೆ.ವಿ.ಅಗಡಿ. (ವಕೀಲರು ಹಾಗೂ ಗೌರವಾಧ್ಯಾಕ್ಷರು ) ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸವದತ್ತಿ ತಹಶಿಲ್ದಾರ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಕಳುಹಿಸಲಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಆನಂದ ಮಾಮನಿ ಅವರ ಗಮನಕ್ಕೆ ತಂದಿದ್ದು ಮನವಿಯನ್ನು ಸಹ ನೀಡಲಾಗಿದೆ. ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಎರಡು ತಿಂಗಳು ಕಳೆದರು ಇನ್ನೂ ಯಾವುದೇ ಪ್ರಯೋಜನವಾಗಿಲ್ಲ.
ಆನಂದ ಮಾಮನಿ. ಶಾಸಕ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ.
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಬಗ್ಗೆ ಕೂಡಲೆ ಅಪರ ಜಿಲ್ಲಾಧಿಕಾರಿ, ಕೃಷಿ ಜಂಟಿ ನಿರ್ದೇಶಕರು, ಡೆಪ್ಯೂಟಿ ಡೈರೆಕ್ಟರ್ ಮತ್ತು ತಹಶಿಲ್ದಾರ ಸಭೆ ಕರೆದು ಚರ್ಚಿಸಿ ಮಾಹಿತಿ ತಿಳಿಸಲಾಗುವುದು.
ನಿಂಗಪ್ಪ ಪೂಜಾರ. (ಮೆಕ್ಕೆಜೋಳ ಬೆಳೆದ ರೈತ) ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚಿನೊಂದಿಗೆ ಮೆಕ್ಕೆಜೋಳ ಬೆಳೆದಿದ್ದೇನೆ. ಮಾರಾಟ ಮಾಡಿ ಸಾಲ ಮುಟ್ಟಿಸಿದರಾಯ್ತು ಎಂದುಕೊಂಡಿದ್ದೆ. ಆದರೆ ಮಾರಾಟಕ್ಕೆ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದರಿಂದ ಖರ್ಚಿನ ಹಣ ಸಹ ದೊರಕುವುದಿಲ್ಲ.