ಮೂಡಲಗಿ

ಕನ್ನಡ ನಾಮಫಲಕ ಅಳವಡಿಕೆಗೆ ತಾಲೂಕಾಡಳಿತ ವೈಫಲ್ಯ

ಕನ್ನಡ ನಾಮಫಲಕ ಅಳವಡಿಕೆಗೆ ತಾಲೂಕಾಡಳಿತ ವೈಫಲ್ಯ

ಮೂಡಲಗಿ 30: ನಗರದಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ನಿರಂತರವಾಗಿ ಕನ್ನಡ ಪರ  ಸಂಘಟನೆಗಳು ಮನವಿ ಮಾಡಿಕೊಂಡಿದ್ದರು ಸಹ ಈವರೆಗೆ ಯಾವುದೇ ಕ್ರಮ ಹಾಗೂ ಬದಲಾವಣೆಗಳು ಕಾಣದಿರುವುದು ಪುರಸಭೆ ಮತ್ತು ತಾಲೂಕಾಡಳಿತದ ವೈಪಲ್ಯವನ್ನು ಎತ್ತಿ ತೋರಿಸುತ್ತಿದೆಂದು ಕರ್ನಾಟಕ ನವನಿರ್ಮಾಣ ಸೇನೆ ತಾಲೂಕಾಧ್ಯಕ್ಷ ಸಚಿನ್ ಲೆಂಕೆನ್ನವರ ಖಂಡಿಸಿದರು. 

ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಪ್ರತಿ ಬಾರಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿಕೊಂಡಾಗ ಅಂಗಡಿಗಳಿಗೆ ನಾಮಕಾವಸ್ಥೆ ಸೂಚನಾ ಪತ್ರಗಳನ್ನು ಕಳುಹಿಸಿದ್ದನ್ನು ಹೊರತು ಪಡಿಸಿ ಈವರೆಗು ಪುರಸಭೆಯು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಬೆಸರದ ಸಂಗತಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ರಾಜ್ಯೋತ್ಸವದ ಪೂರ್ವಬಾವಿ ಸಭೆಯಲ್ಲಿ ಈ ವಿಚಾರವಾಗಿ ಮನವಿ ಅಥವಾ ಚರ್ಚೆಗೆ ಅವಕಾಶ ನೀಡದಿರುವ ನಿಟ್ಟಿನಲ್ಲಿ ಪುರಸಭೆ ಕ್ರಮಕೈಗೊಳ್ಳಲು ಕರ್ನಾಟಕ ನವನಿರ್ಮಾನ ಸೇನೆ ಅಷ್ಟೆಯಲ್ಲದೆ ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳ ಮನವಿಯಾಗಿರುತ್ತದೆ. ಕಳೆದಬಾರಿ ಜಿಲ್ಲಾಧಿಕಾರಿಗಳು ಹೊರಡಿಸಿದ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆ ಆದೇಶದ ಬೆನ್ನಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಮೂಡಲಗಿ ತಾಲೂಕಾ ಘಟಕ ಮನವಿಮಾಡಿತ್ತಾದರು ಪುರಸಭೆಯು ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂದು ಆರೋಪಿಸಿದರು. 

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವ ನುಡಿಯನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ತಕ್ಷಣವೇ ಮೂಡಲಗಿ ಪುರಸಭೆ ಮತ್ತು ತಾಲೂಕಾಡಳಿತವು ಕಡ್ಡಾಯ ಕನ್ನಡ ನಾಮಫಲಕ್ಕೆ ಆದೇಶ ನೀಡುವಂತೆ ಮತ್ತು ಸೂಚಿತ ನಿರ್ಧಿಷ್ಟಾವಧಿಯಲ್ಲಿ ನಾಮಫಲಕಗಳು ಬದಲಾಗುವಂತೆ ಸೂಚನೆಯನ್ನು ಹೊರಡಿಸಬೇಕು ಮತ್ತು ಸೂಚನೆ ಪಾಲಿದಿರುವವರ ವಿರುದ್ಧ ಕ್ರಮಕ್ಕೆ  ಮುಂದಾಗುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿಯವರು ಕನ್ನಡಪರ ಸಂಘಟನೆಗಳ ನೇತೃತ್ದಲ್ಲೇ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಮುಂದಾಗುತ್ತೇವೆಂದು ವಿಶ್ವಾಸ ವ್ಯಕ್ತ ಪಡಿಸಿದರು 

ಈ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷ ಮಹಾಂತೇಶ ಮುಗಳಖೋಡ, ಭರತರಾಜ ಪಾಟೀಲ, ಮಲಗೌಡ ಪಾಟೀಲ, ಯುನುಸ್ ನಾಗರಾಳ, ರಾಜೇಸಾಬ ಹುಬ್ಬಳ್ಳಿ, ಶ್ರೀದರ ಹೊಸಕೋಟಿ, ಪ್ರದೀಪ ಬಡಿಗೇರ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ