ರಷ್ಯಾದ ಬೆಲ್ಗೊರೊಡ್‌ನಲ್ಲಿ ಸ್ಫೋಟ: ಮೂವರು ಸಾವು
ಮಾಸ್ಕೋ: ಜುಲೈ 03: ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಫೆಬ್ರವರಿ ತಿಂಗಳಿನಿಂದ ಯುದ್ಧ ನಡೆಯುತ್ತಿದೆ. ಈ ದೀರ್ಘ ಕಾಲದ ಯುದ್ಧದ ಮಧ್ಯೆಯೆ ಉಕ್ರೇನ್, ರಷ್ಯಾದ ಮೇಲೆ ದಾಳಿ ಮಾಡಿದೆ ಎಂದು ರಷ್ಯಾ ಆರೋಪಿಸಿದೆ. ಅಲ್ಲದೆ, ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮದ ಅಗತ್ಯವಿದೆ ಎಂದು ಕೂಡ ತಿಳಿಸಿದೆ.
ರಷ್ಯಾ ಹಾಗೂ ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಬೆಲ್ಗೊರೊಡ್ ನಗರದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ. ಈ ಕುರಿತು ಮಾತನಾಡಿದ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್, ಈ ಸ್ಫೋಟದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಸ್ಫೋಟದಿಂದ ಸುಮಾರು 50 ಕಟ್ಟಡಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಗ್ಲಾಡ್ಕೋವ್ ಅವರ ಹೇಳಿಕೆಯನ್ನು ಬಿಬಿಸಿ ಉಲ್ಲೇಖಿಸಿದೆ.
ಸ್ಫೋಟದ ಕುರಿತು ಮಾತನಾಡಿದ ರಷ್ಯಾದ ಹಿರಿಯ ರಾಜಕಾರಣಿ ಆಂಡ್ರೇ ಕ್ಲಿಶಾಸ್, ಬೆಲ್ಗೊರೊಡ್ ಮೇಲೆ ಉಕ್ರೇನ್ ದಾಳಿ ಮಾಡಿದೆ ಎಂದು ಆರೋಪಿಸಿದರು. ಅಲ್ಲದೆ, ಇದರ ವಿರುದ್ಧ ಮಿಲಿಟರಿ ಕ್ರಮಕ್ಕೆ ಕರೆ ನೀಡಿದರು ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
“ನಾಗರಿಕ ಸಾವು-ನೋವುಗಳು ಮತ್ತು ಬೆಲ್ಗೊರೊಡ್‌ನಲ್ಲಿನ ನಾಗರಿಕ ಮೂಲಸೌಕರ್ಯಗಳ ಮೇಲಿನ ಸ್ಫೋಟ ಉಕ್ರೇನ್‌ನ ದಾಳಿಯಾಗಿದೆ. ಅದರ ವಿರುದ್ಧ ಮಿಲಿಟರಿ ಕ್ರಮದ ಅಗತ್ಯವಿದೆ” ಎಂದು ಶ್ರೀ ಕ್ಲಿಶಾಸ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಬಿಬಿಸಿ ಪ್ರಕಾರ, ಫೆಬ್ರವರಿ 24 ರಂದು ಉಕ್ರೇನಿಯನ್-ರಷ್ಯನ್ ಸಂಘರ್ಷ ಪ್ರಾರಂಭವಾದಾಗಿನಿಂದ ಸಾವಿರಾರು ನಾಗರಿಕರು ಮತ್ತು ಯೋಧರು ಹತರಾಗಿದ್ದಾರೆ. ಕನಿಷ್ಠ 1.2 ಕೋಟಿ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆಂದು ಮಾಹಿತಿ ನೀಡಿದೆ.