ಕೈವ್, ಖಾರ್ಕಿವ್ ನಲ್ಲಿ ಸ್ಫೋಟ: ಗಾಯಗೊಂಡವರ ಬಗ್ಗೆ ಮಾಹಿತಿ ಇಲ್ಲ
ಕೈವ್: ಫೆಬ್ರವರಿ 28: ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂಬ ರಷ್ಯಾದ ಹೇಳಿಕೆಯ ನಡುವೆ, ಸೋಮವಾರ ಮತ್ತೊಂದು ಕ್ಷಿಪಣಿ ಉಕ್ರೇನ್‌ನ ವಸತಿ ಕಟ್ಟಡಕ್ಕೆ ಅಪ್ಪಳಿಸಿದ್ದು, ಮುಂಜಾನೆ ಕೈವ್ ಮತ್ತು ಖಾರ್ಕಿವ್ ನಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ.
ಉಕ್ರೇನ್‌ನ ರಾಜ್ಯ ಸೇವೆಯ ಪ್ರಕಾರ, ಚೆರ್ನಿಹಿವ್ ನ ಮಧ್ಯಭಾಗದಲ್ಲಿರುವ ವಸತಿ ಕಟ್ಟಡಕ್ಕೆ ಕ್ಷಿಪಣಿ ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡಿತು. ಎರಡು ಕೆಳ ಮಹಡಿಗಳಲ್ಲಿ ಬೆಮಕಿ ಹರಡಿತ್ತು. ಗಾಯಗೊಂಡವರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
“ಕೈವ್ ಮತ್ತು ಖಾರ್ಕಿವ್ ನಲ್ಲಿ ಮತ್ತೆ ಸ್ಫೋಟಗಳ ಶಬ್ದ ಕೇಳಿಬರುವ ಮೊದಲು, ಉಕ್ರೇನ್ ರಾಜಧಾನಿ ಹಲವಾರು ಗಂಟೆಗಳ ಕಾಲ ಶಾಂತವಾಗಿತ್ತು. ತದನಂತರ ನಗರದಲ್ಲಿ ಮುಂಜಾನೆ ವಾಯುದಾಳಿ ನಡೆದಿದೆ. ಇದಕ್ಕೂ ಮೊದಲು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮುಂದಿನ 24 ಗಂಟೆಗಳು ಉಕ್ರೇನ್‌ಗೆ ನಿರ್ಣಾಯಕ ಅವಧಿಯಾಗಿದೆ ಎಂದು ಹೇಳಿದರು.
ಉಕ್ರೇನ್‌ಗೆ ಪ್ರಮುಖ ವೈದ್ಯಕೀಯ ಸರಬರಾಜು ಮತ್ತು ಸಹಾಯವನ್ನು ಒದಗಿಸಲು ಹೆಚ್ಚುವರಿ 40 ಮಿಲಿಯನ್ ಪೌಂಡ್ ಗಳನ್ನು ಕಳುಹಿಸಲಾಗುವುದು ಎಂದು ಯುಕೆ ಹೇಳಿದೆ.
ಉಕ್ರೇನ್-ರಷ್ಯಾ ಪರಿಸ್ಥಿತಿಯ ಮಧ್ಯೆ, ಯುಎನ್ ಎಸ್ ಸಿ 1982 ರಿಂದ ಮೊದಲ ಬಾರಿಗೆ ಯುಎನ್ ಜಿಎ ತುರ್ತು ವಿಶೇಷ ಅಧಿವೇಶನಕ್ಕೆ ಕರೆ ನೀಡಿದೆ. ಸೋಮವಾರ ಅಧಿವೇಶನ ನಡೆಯಲಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.