ಸೋಂಕಿನ ಕೇಂದ್ರಗಳಾಗುತ್ತಿವೆ ಯುರೋಪ್ ರಾಷ್ಟ್ರಗಳು – ಆಸ್ಟ್ರೀಯಾದಲ್ಲಿ ಮತ್ತೆ ಲಾಕ್ ಡೌನ್!
ಲಂಡನ್, ನ 23 ಯುರೋಪ್ ನ ರಾಷ್ಟ್ರಗಳು ಮತ್ತೆ ಕರೊನಾ ಸೋಂಕಿನ ಕೇಂದ್ರಗಳಾಗುತ್ತಿವೆ. ಈ ಮಧ್ಯೆ, ಭಯಾನಕ ಸುದ್ದಿಯೊಂದು ಜರ್ಮಿನಿಯಿಂದ ಹೊರಬಿದ್ದಿದ್ದು, ನಾಲ್ಕನೇ ಅಲೆ ಉಂಟಾಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ಕರೊನಾ ಲಸಿಕೆ ಕಡ್ಡಾಯ ಮಾಡಲಾಗಿದೆ. ಇನ್ನೊಂದೆಡೆ ಕರೊನಾ ಸೋಕಿನ ಪ್ರಕರಣಗಳು ಕಂಟ್ರೋಲ್ ಗೆ ಸಿಗದ ಕಾರಣ ಆಸ್ಟ್ರೀಯಾದಲ್ಲಿ ನಿನ್ನೆಯಿಂದ ರಾಷ್ಟ್ರ ವ್ಯಾಪಿ ಕಟ್ಟುನಿಟ್ಟಿನ ಲಾಕ್ ಡೌನ್ ವಿಧಿಸಲಾಗಿದೆ.
ಆಸ್ಟ್ರಿಯಾ ಸೇರಿದಂತೆ ಯುರೋಪ್‌ನ ಹಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಅಲ್ಲಿನ ಆರೋಗ್ಯ ವ್ಯವಸ್ಥೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆಸ್ಟ್ರಿಯಾದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ 20 ದಿನಗಳ ಕಾಲ ಇರಲಿದೆ ಅಂತಾ ಅಲ್ಲಿನ ಸರ್ಕಾರ ತಿಳಿಸಿದೆ. ಈ ವೇಳೆ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ್ರೆ ಲಾಕ್ ಡೌನ್ ತೆಗೆದು ಹಾಕುತ್ತೇವೆ. ಇಲ್ಲದಿದ್ದರೆ ಹತ್ತು ದಿನಗಳ ನಂತ್ರ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಅನ್ನೋ ಬಗ್ಗೆ ಪರಿಶೀಲಿಸುತ್ತೇವೆ ಅಂತಾ ಆಸ್ಟ್ರೀಯಾ ಹೇಳಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಜನ ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಅಧಿಕ ಪ್ರಮಾಣದಲ್ಲಿ ಶಾಪ್ ಗಳನ್ನು ಬಂದ್ ಮಾಡಲಾಗಿದೆ. ರಾಲಿ, ಮೆರವಣಿಗೆ, ದೊಡ್ಡ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಶಾಲೆಗಳು ಮತ್ತು ಡೇ-ಕೇರ್ ಸೆಂಟರ್ ಗಳನ್ನು ತೆರೆಯಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಆದರೂ ಸಹ ಪೋಷಕರಿಗೆ ಮಕ್ಕಳನ್ನು ಮನೆಯಲ್ಲಿ ಇರಿಸಿಕೊಳ್ಳುವಂತೆ ಸಲಹೆ ನೀಡಿದೆ.
ಆಸ್ಟ್ರಿಯಾದಲ್ಲಿ, ಲಾಕ್‌ಡೌನ್ ನಿರ್ಬಂಧಗಳನ್ನು ಡಿಸೆಂಬರ್ 13 ರಂದು ತೆಗೆದುಹಾಕುವ ಸಾಧ್ಯತೆ ಇದೆ. ಆದರೆ ಲಸಿಕೆ ಪಡೆಯದವರಿಗೆ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆ ಇದೆ. ಈ ಮಧ್ಯೆ ಭಾನುವಾರದಂದು ಸೆಂಟ್ರಲ್ ವಿಯೆನ್ನಾದ ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್ ಖರೀದಿಗಾಗಿ ಜನ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡುಬಂದಿವೆ.