ರೈತರು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿ: ಆನಂದ ಮಾಮನಿ
ಸವದತ್ತಿ 23: ಕೃಷಿಯಲ್ಲಿ ಸಾಕಷ್ಟು ಆಧುನಿಕತೆಯ ಉಪಕರಣಗಳು ಬೆಳಕಿಗೆ ಬಂದಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಯಂತ್ರಗಳ ಬಳಕೆ ಮೂಲಕ ಸಮಗ್ರ ಕೃಷಿಯನ್ನು ಬೆಳೆದು ಆರ್ಥಿಕ ಅಭಿವೃದ್ಧಿಯ ಕಡೆಗೆ ಒತ್ತು ನೀಡಬೇಕೆಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ಕರೀಕಟ್ಟಿ ರಸ್ತೆಯ ಕೃಷಿ ಇಲಾಖೆ ಕೇಂದ್ರದಲ್ಲಿ ವರ್ಷಾ ಅಸೋಸಿಯೇಟ್ಸ್ ಸಹಯೋಗದೊಂದಿಗೆ ಆಯೋಜಿಸಿದ ಕೃಷಿ ಯಂತ್ರ ಧಾರೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಯಾನುಸಾರ ಮಳೆಯಾಗದೆ ಮಳೆಯಲ್ಲಿ ವ್ಯತ್ಯಾಸವಾಗುತ್ತಿರುವದರಿಂದ ರೈತರು ಈಗಾಗಲೆ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದು, ಒಂದೆ ತೆರನಾದ ಬೆಳೆಯನ್ನು ಎಲ್ಲ ರೈತರು ಬೆಳೆಯುತ್ತಿರುವದರಿಂದ ಅವರು ನಾನಾ ರೂಪದಲ್ಲಿ ಹಾನಿಯನ್ನು ಅನುಭವಿಸುವಂತಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಸರಿಯಾದಂತ ಮಾಹಿತಿ ನೀಡಿ ವಿವಿಧ ತರಹದ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕೆಂದರು. ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದ ಉಳುಮೆಯಿಂದ ರಾಶಿ ಮಾಡುವವರೆಗೆ ಕೃಷಿ ಯಂತ್ರಗಳನ್ನು ಶೇ.25ರಷ್ಟು ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕೊರೊನಾದ ಎರಡನೆ ಅಲೆ ಹೆಚ್ಚುತ್ತಿರುವದರಿಂದ ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ನಿರ್ಭಂದ ಹೇರಲಾಗಿದ್ದು, ಕ್ಷೇತ್ರದಲ್ಲಿ ಮುಂದಿನ ಆದೇಶದವರೆಗೆ ಸಂಪೂರ್ಣ ದರ್ಶನವನ್ನು ಬಂದ ಮಾಡಲಾಗಿರುವದರಿಂದ ಭಕ್ತರು ಸಹಕರಿಸಬೇಕೆಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ರೈತರ ಆರ್ಥಿಕ ಸಮಸ್ಯೆಯನ್ನು ದೂರಮಾಡುವ ನಿಟ್ಟಿನಲ್ಲಿ ಕೃಷಿ ಯಂತ್ರಧಾರೆ ಯೋಜನೆ ಸಂಪೂರ್ಣ ಸಹಕಾರಿಯಾಗಲಿದೆ ಎಂದರು. ಸವದತ್ತಿ ತಾಲೂಕಿನ ಯರಗಟ್ಟಿ ಮತ್ತು ಮುನವಳ್ಳಿ ಹೋಬಳಿಗಳಲ್ಲಿ ಈ ಯೋಜನೆಯು ಚಾಲನೆ ಇದ್ದು, ಸವದತ್ತಿ ಹೋಬಳಿಯಲ್ಲಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1ಕೋಟಿ ರೂ.ಗಳ ವೆಚ್ಚದಲ್ಲಿ ಕೃಷಿ ಉಪಕರಣಗಳನ್ನು ತರಲಾಗಿದೆ ಎಂದರು. ರೈತರು ತಮ್ಮ ಹೊಲ ಉಳಿಮೆ ಮಾಡಲು ಸಹಕಾರಿಯಾಗುವ ನಿಟ್ಟಿನಲ್ಲಿ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಉಪಕರಣಗಳನ್ನು ನೀಡಲಾಗುತ್ತಿದ್ದು, ವರ್ಷಾ ಅಸೋಸಿಯೇಟ್ಸ್ನವರು ಅದರ ನಿರ್ವಹಣೆ ಮಾಡುತ್ತಿದ್ದಾರೆ ಎಂದರು. ರೈತರು ಯಾಂತ್ರಿಕರಣ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಹೊಂದಾಣಿಕೆಯಾಗಿ ಕೃಷಿಯಲ್ಲಿ ಅಭಿವೃದ್ದಿಯನ್ನು ಕಂಡಕೊಳ್ಳಬೇಕೆಂದರು.
ತಹಸೀಲ್ದಾರ ಪ್ರಶಾಂತ ಪಾಟೀಲ, ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಕೃಷಿಕ ಸಮಾಜದ ಅಧ್ಯಕ್ಷ ನಿಂಗಪ್ಪ ಮೀಶಿ, ಜಿ.ಪಂ ಸದಸ್ಯೆ ಶಿವಗಂಗಾ ಗೊರವನಕೊಳ್ಳ, ತಾ.ಪಂ ಸದಸ್ಯರಾದ ಕಲ್ಲಪ್ಪ ಮಲ್ಲಾಡ, ಪ್ರಕಾಶ ಲಮಾಣಿ, ಪುರಸಭೆ ಸದಸ್ಯರಾದ ಶಿವಾನಂದ ಹೂಗಾರ, ಅರ್ಜುನ ಅಮ್ಮೋಜಿ, ಮೌಲಸಾಬ ತಬ್ಬಲಜಿ ಇತರರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ಕೆ.ಎನ್.ಮಾರಡ್ಡಿ ಸ್ವಾಗತಿಸಿದರು. ಕೃಷಿ ಅಧಿಕಾರಿ ದೇಸಾಯಿ ನಿರೂಪಿಸಿದರು. ಬಸವರಾಜ ಬಿರುಕಲ್ಲ ವಂದಿಸಿದರು.