ಮಹಿಳೆಯರಿಗೆ ಆರ್ಥಿಕ ಸಾಕ್ಷರತಾ ಅಭಿಯಾನ
ಸವದತ್ತಿ 08: ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಮುಂದೆ ಬಂದು ತಮ್ಮ ಪ್ರಾತಿನಿಧ್ಯವನ್ನು ಪಡೆದುಕೊಳ್ಳುತ್ತಿದ್ದು, ಅದರಂತೆ ಅವರು ಆರ್ಥಿಕವಾಗಿ ಸಬಲರಾಗಬೇಕಾದಲ್ಲಿ ಅವರಿಗೂ ಹಣಕಾಸು ಸೌಲಭ್ಯವನ್ನು ನೀಡುವ ಕಾರ್ಯ ನಡೆಯಬೇಕಿದೆ ಎಂದು ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕ ಬಿ.ಎಸ್.ಕಟ್ಟಿ ಹೇಳಿದರು.
ಸ್ಥಳೀಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಮಹಿಳೆಯರಿಗೆ ಆರ್ಥಿಕ ಸಾಕ್ಷರತಾ ಅಭಿಯಾನ ಮತ್ತು ವಿಕಾಸ ಆಶಾ ಯೋಜನೆಯಡಿ ಸಾಲಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಕೆವಿಜಿ ಬ್ಯಾಂಕಿನಿಂದ ಮಹಿಳೆಯರಿಗೋಸ್ಕರ ಅನೇಕ ರೀತಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಪುರಸಭೆಯ ಶ್ವೇತಾ ನಾಯಕ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಹಿಳೆ ಇಲ್ಲದ ಕ್ಷೇತ್ರವೇ ಇಲ್ಲ. ಆಕೆ ಎಲ್ಲ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾಳೆ. ಆದರೂ ಮಹಿಳೆ ಸ್ವಾವಲಂಬಿಯಾಗಿ ಬೆಳೆಯಬೇಕಾಗಿದ್ದು, ಸಮಾಜದಲ್ಲಿ ಮಹಿಳೆಯರು ಯಾವದಕ್ಕೂ ಹಿಂಜರಿಯದೆ ಮುಂದೆ ಬಂದು ತಮ್ಮಲ್ಲಿರುವಂತ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕೆಂದರು.
ಕೆವಿಜಿ ಬ್ಯಾಂಕಿನಿಂದ ವಿಕಾಸ ಆಶಾ ಯೋಜನೆಯಡಿ ಫಲಾನುಭವಿ ಮಹಿಳೆಯರಿಗೆ ಸಾಂಕೇತಿಕವಾಗಿ 10 ಲಕ್ಷ ರೂ.ಗಳ ಸಾಲಪತ್ರಗಳನ್ನು ವಿತರಣೆ ಮಾಡಲಾಯಿತು.
ಅನೀಲ ಚೌದರಿ, ಶಿವಪ್ರಸಾದ, ಮೋನಿಕಾ ಯು.ಕೆ, ಕವಿತಾ ಜಿ.ಎಚ್, ರವಿ ತಲ್ಲೂರಮಠ, ಶಿವಶಂಕರ ಹಿರೇಮಠ ಉಪಸ್ಥಿತರಿದ್ದರು.
ಶ್ವೇತಾ ಸೋಗಿ ಸ್ವಾಗತಿಸಿದರು. ರವಿ ತಲ್ಲೂರಮಠ ನಿರೂಪಿಸ ವಂದಿಸಿದರು.